ಸಾರಾಂಶ
ದೋಟಿಹಾಳದಿಂದ ಗೋತಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆ ಒತ್ತುವರಿಕನ್ನಡಪ್ರಭ ವಾರ್ತೆ ಕುಷ್ಟಗಿ
ರಸ್ತೆಯನ್ನು ರಸ್ತೆಯ ಅಕ್ಕಪಕ್ಕದಲ್ಲಿರುವ ಕೆಲವರು ಒತ್ತುವರಿ ಮಾಡಿಕೊಂಡು ರಸ್ತೆಯುದ್ದಕ್ಕೂ ಮುಳ್ಳು ಕಂಟಿಗಳನ್ನು ಹಾಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಪೂರ್ಣ ರಸ್ತೆಯನ್ನು ಬಂದ್ ಮಾಡಿದ ಘಟನೆ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ದೋಟಿಹಾಳದಿಂದ ಗೋತಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆಯಿದಾಗಿದ್ದು, ಅಕ್ಕಪಕ್ಕದಲ್ಲಿರುವ ಕೆಲವರು ತಮ್ಮ ಹೊಲಗಳಿಗೆ ಮಾತ್ರ ಬದುವು ನಿರ್ಮಿಸಲಾಗದೆ ಸಾರ್ವಜನಿಕ ರಸ್ತೆ ಆಕ್ರಮಿಸಿಕೊಂಡು ಮುಳ್ಳು ಕಂಟಿಗಳನ್ನು ಹಾಕಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ನೂರಾರು ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ರಸ್ತೆಯನ್ನು ಒತ್ತುವರಿ ಮಾಡಿಕೊಂಡ ರೈತರು ಮುಳ್ಳು ಕಂಟಿಗಳನ್ನು ತೆಗೆಯಲಾರದ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಸೇರಿಕೊಂಡು ಮುಖ್ಯ ರಸ್ತೆಗೆ ಮುಳ್ಳು ಕಂಟಿಗಳನ್ನು ಹಾಕುವ ಮೂಲಕ ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.ಭಕ್ತರಿಗೆ ತೊಂದರೆ:
ಇದೇ ರಸ್ತೆಯಲ್ಲಿ ಸುಮಾರು ಒಂದು ಕಿಮೀ ದೂರದಲ್ಲಿ ಮಟ್ಟಿ ಮರದ ಹನುಮಪ್ಪ ದೇವಸ್ಥಾನವಿದ್ದು, ಈ ದೇವಸ್ಥಾನಕ್ಕೆ ಶನಿವಾರಕ್ಕೊಮ್ಮೆ ನೂರಾರು ಭಕ್ತರು ದೇವರ ದರ್ಶನಕ್ಕೆ ಹೋಗುತ್ತಾರೆ. ಶನಿವಾರವೇ ರಸ್ತೆ ಬಂದ್ ಮಾಡಿದ್ದರಿಂದ ಅಕ್ಕಪಕ್ಕದ ಹೊಲಗಳಿಂದ ದೇವಸ್ಥಾನಕ್ಕೆ ತರಳಿ ದೇವರ ದರ್ಶನ ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು.ಸುಮಾರು ನಾಲ್ಕು ವರ್ಷಗಳ ಹಿಂದೆ ಕುಷ್ಟಗಿಯ ಪಿಎಸ್‌ಐ ವಿಶ್ವನಾಥ ಹಿರೇಗೌಡರ ಇದ್ದ ಸಂದರ್ಭದಲ್ಲಿ ಇದೇ ರೀತಿ ಸಮಸ್ಯೆಯಾಗಿತ್ತು. ಅಂದು ಪಿಎಸೈ ಅವರು ಸ್ಥಳಕ್ಕೆ ಆಗಮಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲು ಸೂಚನೆ ನೀಡಿದ್ದರು. ಆದರೂ ಅವರು ಸಮಸ್ಯೆಯ ನಿವಾರಣೆಗೆ ಸಹಕಾರ ನೀಡಲಿಲ್ಲ ಎಂದು ಗ್ರಾಮದ ನಿವಾಸಿಗಳು ಅಳಲನ್ನು ತೋಡಿಕೊಂಡರು.
ಈ ಕುರಿತು ಗ್ರಾಮದ ರೈತರೊಬ್ಬರು ಮಾಹಿತಿ ನೀಡಿ, ದೋಟಿಹಾಳ-ಗೋತಗಿ ರಸ್ತೆ ಸುಮಾರು 32 ಅಡಿ ಅಗಲವಿದ್ದು, ಈಗ 10 ಅಡಿ ಸಹ ಇಲ್ಲದಂತಾಗಿದೆ. ಅಕ್ಕ-ಪಕ್ಕದ ಹೊಲದ ರೈತರು ಒತ್ತುವರಿ ಮಾಡಿಕೊಂಡಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ವಿನಂತಿಸಿದ್ದಾರೆ.