ಸಾರಾಂಶ
ಶಿಕಾರಿಪುರ: ಇಲ್ಲಿನ ಪುರಸಭೆಯಲ್ಲಿ ಖಾತೆ ಬದಲಾವಣೆಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. 2006ರಿಂದ ಇದವರೆಗೂ ಸ್ಥಳೀಯ ಜನತೆಯಿಂದ ಕೋಟ್ಯಾಂತರ ರುಪಾಯಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಮಹೇಂದ್ರಕುಮಾರ್ ಜೈನ ಆಗ್ರಹಿಸಿದರು
ಶಿಕಾರಿಪುರ: ಇಲ್ಲಿನ ಪುರಸಭೆಯಲ್ಲಿ ಖಾತೆ ಬದಲಾವಣೆಗೆ ದುಪ್ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. 2006ರಿಂದ ಇದವರೆಗೂ ಸ್ಥಳೀಯ ಜನತೆಯಿಂದ ಕೋಟ್ಯಾಂತರ ರುಪಾಯಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಮಹೇಂದ್ರಕುಮಾರ್ ಜೈನ ಆಗ್ರಹಿಸಿದರು.
ಶನಿವಾರ ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2006ಕ್ಕೂ ಮುನ್ನ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಸ್ತಿ ಖಾತೆ ವರ್ಗಾವಣೆ ಶುಲ್ಕ ನಿರ್ಧರಿಸಲಾಗುತ್ತಿತ್ತು. ಶುಲ್ಕ ನಿರ್ಧಾರ ಏಕರೂಪದಲ್ಲಿ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಏಕರೂಪ ಶುಲ್ಕ ನಿಗದಿಪಡಿಸಿ 30-1-2006ರಲ್ಲಿ ಸುತ್ತೋಲೆ ಹೊರಡಿಸಿದೆ. ಅದರಂತೆ ಖಾತೆ ಬದಲಾವಣೆಗೆ ನೋಂದಣಿ ಆದ ಸ್ವತ್ತಿನ ಸ್ಟಾಂಪ್ ಡ್ಯೂಟಿ ಮೇಲೆ ಶೇ.1ರಷ್ಟು ಹಣ ಪಡೆಯಬೇಕು ಎಂದು ನಮೂದಿಸಿದೆ. 11 ಲಕ್ಷ ರು. ಮೌಲ್ಯದ ಸ್ವತ್ತಿಗೆ 56,000 ಸ್ಟಾಂಪ್ ಡ್ಯೂಟಿ ಆಗುತ್ತದೆ ಅದಕ್ಕೆ ಶೇ.1ರಷ್ಟು ಎಂದರೆ 560 ರು. ಪುರಸಭೆ ಪಡೆಯಬೇಕು ಆದರೆ ಪುರಸಭೆ 11065 ರು. ಪಡೆಯುತ್ತಿದೆ ಎಂದು ದೂರಿದರು.ಹಣ ಕಟ್ಟುವ ನೋಟಿಸ್‌ನಲ್ಲಿ ಎಷ್ಟು ಕಟ್ಟಬೇಕು ಎಂದು ನಮೂದಿಸುವುದಿಲ್ಲ. ಬದಲಿಗೆ ಪುರಸಭೆ ಮುಖ್ಯಾಧಿಕಾರಿ ಹೆಸರಿಗೆ ಹಣ ಕಟ್ಟುವ ಚಲನ್‌ನಲ್ಲಿ ಮಾತ್ರ ಶುಲ್ಕ ನಮೂದಿಸಲಾಗುತ್ತಿದೆ. ಪಟ್ಟಣದ ಸಾವಿರಾರು ಜನರಿಂದ ಕೋಟ್ಯಾಂತರ ರೂಪಾಯಿ ಪುರಸಭೆ ಸಂಗ್ರಹಿಸಿದೆ ಅದು ಏನಾಗಿದೆ ಎನ್ನುವ ಕುರಿತು ತನಿಖೆ ನಡೆಸಬೇಕು. ಈಗ ಪಡೆಯುತ್ತಿರುವ ಅವೈಜ್ಞಾನಿಕ ಶುಲ್ಕ ಪದ್ಧತಿ ಕೂಡಲೆ ಕೈಬಿಡಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಕೀಲ ಬೀಷ್ಪತಿ, ಚಂದ್ರಕುಮಾರ್ ದೂಪಣ್ಣ ಉಪಸ್ಥಿತರಿದ್ದರು.