ನಾಮಪತ್ರ ಸಲ್ಲಿಕೆ ಬಳಿಕ ಬೆಂಬಲ ದ್ವಿಗುಣ: ಈಶ್ವರಪ್ಪ

| Published : Apr 12 2024, 01:00 AM IST

ಸಾರಾಂಶ

ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವು ಶಕ್ತಿಗಳು ವಿನಾಕಾರಣ ಸುದ್ದಿ ಹಬ್ಬಿಸುತ್ತಿವೆ. ಅವರಿಗಿರುವ ಸೋಲಿನ ಭಯವೇ ಇದಕ್ಕೆ ಕಾರಣ. ಆದರೆ ನಾನು ಹಿಂದೆ ಸರಿಯುವುದಿಲ್ಲ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಖಚಿತವಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಿದ್ದು, ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಾಮಪತ್ರ ಸಲ್ಲಿಕೆಯ ಬಳಿಕ ಈ ಬೆಂಬಲ ದ್ವಿಗುಣಗೊಳ್ಳಲಿದೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರವನ್ನೂ ಸುತ್ತಿ ಬಂದಿದ್ದೇನೆ. ಎಲ್ಲ ಕಡೆ ಕಾರ್ಯಕರ್ತರ ಸಂಘಟನೆಯ ಕೆಲಸವಾಗುತ್ತಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಇದುವರೆಗ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಲೇ ಸಾಧ್ಯವಾಗಿಲ್ಲ ಎಂದರು.

ನನ್ನ ಬೆಂಬಲಕ್ಕೆ ಹಿಂದುಳಿದ ವರ್ಗದ ದೊಡ್ಡ ಸಂಖ್ಯೆಯ ಜನರೇ ನಿಂತಿದ್ದಾರೆ. ದಲಿತರು ಜೊತೆಯಾಗಿದ್ದಾರೆ. ಮುಂದುವರೆದ ಜಾತಿ ಎಂದು ಹೇಳುವ ಬ್ರಾಹ್ಮಣರು, ಲಿಂಗಾಯಿತರು ಮತ್ತು ಒಕ್ಕಲಿಗರು ಅವರದೇ ಆದ ಬೇರೆ ಬೇರೆ ಕಾರಣಕ್ಕೆ ನನಗೆ ಬೆಂಬಲ ಸೂಚಿಸಿದ್ದಾರೆ. ಇದು ನನಗೆ ದೊಡ್ಡ ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು.

ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವು ಶಕ್ತಿಗಳು ವಿನಾಕಾರಣ ಸುದ್ದಿ ಹಬ್ಬಿಸುತ್ತಿದ್ದಾರೆ. ಸೋಲಿನ ಭಯವೇ ಇದಕ್ಕೆ ಕಾರಣ. ಆದರೆ ನನ್ನ ಉದ್ದೇಶದಿಂದ ನಾನು ಹಿಂದೆ ಸರಿಯುವುದಿಲ್ಲ. ನನ್ನ ಕಾರ್ಯಕರ್ತರು ಇಂತಹ ಯಾವುದೇ ಸುದ್ದಿಯನ್ನು ನಂಬಬಾರದು ಎಂದು ಮನವಿ ಮಾಡಿದರು.

ಮಾತುಕತೆ ಮುಗಿದಿದೆ: ಬಿಜೆಪಿ ವರಿಷ್ಠರ ಜೊತೆ ನನ್ನ ಮಾತುಕತೆ ಮುಗಿದಿದೆ. ಇನ್ನು ಯಾರ ಜೊತೆಗೂ ಮಾತುಕತೆಗೆ ಕೂರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನನ್ನನ್ನು ಇನ್ನೂ ಪಕ್ಷದಿಂದ ಯಾಕೆ ಉಚ್ಚಾಟಿಸಿ ಎಂದು ನನಗೆ ಗೊತ್ತಾಗುತ್ತಿಲ್ಲ. ಉಚ್ಚಾಟಿಸಿದರೆ ಇನ್ನಷ್ಟು ಕಟುವಾಗಿ ಮಾತನಾಡಲು ಸಾಧ್ಯ ಎಂದರು.

ಪಕ್ಷದೊಳಗಿರುವ ಇನ್ನೂ ಅನೇಕ ನಾಯಕರಿಗೆ ತೀವ್ರ ಅಸಮಾಧಾನ ಇದೆ. ಕಾಲಕಾಲಕ್ಕೆ ಅದನ್ನು ಹೊರ ಹಾಕಿದ್ದಾರೆ. ನಾನು ಧೈರ್ಯವಾಗಿ ಪಕ್ಷದಿಂದ ಹೊರ ಬಂದು ಪಕ್ಷ ಶುದ್ಧೀಕರಣದ ಹೋರಾಟ ನಡೆಸಿದ್ದೇನೆ. ಅವರುಗಳು ಒಳಗಿದ್ದುಕೊಂಡೇ ಹೋರಾಟ ನಡೆಸುತ್ತಿದ್ದಾರೆ ಎಂದರು.

ನಾಮಪತ್ರ ಸಲ್ಲಿಕೆ: ಶುಕ್ರವಾರ ನಾಮಪತ್ರ ಸಲ್ಲಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮುನ್ನ ಬೆಳಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಟಿ ಪಾರ್ಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಗಾಂಧಿ ಬಜಾರ್, ನೆಹರು ರಸ್ತೆಯ ಮೂಲಕ ಶೀನಪ್ಪ ಶೆಟ್ಟಿ [ಗೋಪಿ ವೃತ್ತ] ವೃತ್ತಕ್ಕೆ ಬರಲಾಗುವುದು. ಅಲ್ಲಿ ಸಭೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಪಪತ್ರ ಸಲ್ಲಿಸಲಾಗುವುದು ಎಂದು ವಿವರಿಸಿದರು.

ನಾಮಪತ್ರದ ಸಲ್ಲಿಸುವ ಠೇವಣಿ ಹಣವಾಗಿ ನಗರದ ಮಹಿಳೆಯರು ಮತ್ತು ಮುತ್ತೈದೆಯರು ಸೇರಿ 24 ಸಾವಿರ ರು. ಮತ್ತು ತೀರ್ಥಹಳ್ಳಿಯ ಭೀಮನಕಟ್ಟೆ ಮಠದ ಶ್ರೀಗಳು 1 ಸಾವಿರ ರು. ನೀಡಿದ್ದು, ನನ್ನ ಗೆಲುವಿಗೆ ಈ ನೆಲದ ಶ್ರೇಷ್ಠರಾದ ಸಾಧು ಸಂತರು ಮತ್ತು ತಾಯಂದಿರುವ ಹರಸಿ ಒಟ್ಟು 25 ಸಾವಿರ ರು. ನೀಡಿದ್ದಾರೆ. ಇದು ನನ್ನ ಗೆಲುವಿನ ಸಂಕೇತ ಎಂದರು.

ಪ್ರಚಾರಕ್ಕೆಂದು ಬೇರೆ ಯಾವ ದೊಡ್ಡ ನಾಯಕರೂ ನನಗಿಲ್ಲ. ಇನ್ನು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅಂತಹವರು ಹಲವರಿದ್ದಾರೆ. ನನಗೆ ಸಾಮಾನ್ಯ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು ಎಂದು ಈಶ್ವರಪ್ಪ ಹೇಳಿದರು.

ಮುಸ್ಲಿಂರ ಮತಗಳೂ ಬರಲಿವೆ!: ಹಿಂದೂ ಭಕ್ತನಿಗೆ ರಾಷ್ಟ್ರಭಕ್ತ ಮುಸಲ್ಮಾನರು ಮತ ಖಂಡಿತವಾಗಿಯೂ ಬೀಳುತ್ತದೆ. ನನ್ನನ್ನು ಅರ್ಥ ಮಾಡಿಕೊಂಡ, ನನ್ನಿಂದ ಸಹಾಯ ಪಡೆದ ಮುಸಲ್ಮಾನರು ಖಂಡಿತವಾಗಿಯೂ ನನಗೆ ಮತ ಚಲಾಯಿಸುತ್ತಾರೆ. ಪ್ರತಿ ಚುನಾವಣೆಯಲ್ಲಿಯೂ ಮಸ್ಲಿಂರು ನನಗೆ ಮತ ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.ಈಶ್ವರಪ್ಪ, ಗೀತಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಈ ನಡುವೆ ಸ್ವತಂತ್ರವಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ವಿರುದ್ಧ ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರರನ್ನು ಕಣಕ್ಕಿಳಿಸಲಾಗಿದೆ. ಅದೇ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸು ತ್ತಿರುವ ಕೆ.ಎಸ್.ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು, ಭಾವಚಿತ್ರ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ. ಜೊತೆಗೆ ಬಿಜೆಪಿ ಭಾಗವೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮತದಾರರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದೆ.

ಚುನಾವಣಾ ವೆಚ್ಚ: ಇನ್ನು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ನಿರ್ಮಾಪಕರಾಗಿರುವ ‘ಭೈರತಿ ರಣಗಲ್’ ಚಲನಚಿತ್ರದ ಜಾಹೀರಾತು ಮೊತ್ತವನ್ನು, ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದು ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.ಗೀತಾ ಅವರ ಪತಿ ‘ಭೈರತಿ ರಣಗಲ್’ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸದರಿ ಸಿನಿಮಾದ ಜಾಹೀರಾತು ಬಿಡುಗಡೆ ಮಾಡಲಾಗಿತ್ತು. ಜಾಹೀರಾತಿಗೆ ಬಿಡುಗಡೆ ಮಾಡಿದ ವೆಚ್ಚವನ್ನು ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂಬುವುದು ಬಿಜೆಪಿ ಪಕ್ಷದ ಆಗ್ರಹವಾಗಿದೆ.