ಸಾರಾಂಶ
ಕಾಂಗ್ರೆಸ್ 5 ವರ್ಷ ಆಡಳಿತ ನಡೆಸುವುದು ಅನುಮಾನ: ಬೆಲ್ಲದ
ರಾಯಚೂರು:
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿರುವವರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಿದರೇ ಈ ಸರ್ಕಾರ ಐದು ವರ್ಷ ಆಡಳಿತ ನಡೆಸುವುದು ಅನುಮಾನ ಎನ್ನುವುದು ಬಾಸವಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಭವಿಷ್ಯ ನುಡಿದರು.ಸ್ಥಳೀಯ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸಂಜೆ ಮಾತನಾಡಿದ ಅವರು, ರಾಜ್ಯವು ತೀವ್ರ ಬರಗಾಲ ಸನ್ನಿವೇಶ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಬಿಜೆಪಿ ಬರ ಅಧ್ಯಯನ ಮಾಡುವುದಾಗಿ ಘೋಷಿಸಿದ ಬಳಿಕ ಎಚ್ಚೆತ್ತ ಸರ್ಕಾರ ಇದೀಗ ತಮ್ಮ ಸಚಿವರನ್ನು ಬರ ವೀಕ್ಷಣೆಗೆ ಕಳುಹಿಸಿಕೊಡುತ್ತಿದೆ ಎಂದರು.
ಬರ ಸಮಯದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ, ಜಿಲ್ಲೆಯವರೇ ಸಣ್ಣ ನೀರಾವರಿ ಸಚಿವರಾಗಿದ್ದರೂ ಹಲವಾರು ಏತ ನೀರಾವರಿ ಯೋಜನೆಗಳು ಮೂಲೆಗುಂಪಾಗಿವೆ. ರೈತರು-ಜನಸಾಮಾನ್ಯರು ಅನಾವೃಷ್ಟಿಗೆ ತುತ್ತಾಗಿ ಸಮಸ್ಯೆ ಎದುರಿಸುತ್ತಿದ್ದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳದ ಸರ್ಕಾರ ಬೆಂಕಿ ಬಿದ್ದಾಗ ಬಾವಿ ತೋಡಿದ ಹಾಗೆ ಆಡಳಿತವನ್ನು ನಡೆಸುತ್ತಿದೆ ಎಂದು ಟೀಕಿಸಿದರು.ಎಲ್ಲ ವಿಚಾರಗಳಿಗೂ ಬಿಜೆಪಿಯನ್ನು ದೋಷಿಸುವ ಮನೋಭಾವನೆಯನ್ನು ಬೆಳೆಸಿಕೊಂಡಿರುವ ಕಾಂಗ್ರೆಸ್ಸಿಗರು, ರಾಜ್ಯದ ಜನತೆಯ ಆಶೀರ್ವಾದದಿಂದ ಆಡಳಿತಕ್ಕೆ ಬಂದು ಐದು ತಿಂಗಳಾಗಿದೆ. ಇನ್ನು ಮಲಗಿರುವ ಕಾಂಗ್ರೆಸ್ ಸರ್ಕಾರವನ್ನು ನೋಡುತ್ತಿದ್ದರೆ ಇದು ಅಲ್ಪ ಆಯುಷಿಯ ಸರ್ಕಾರವಾಗಲಿದೆ ಎನ್ನುವುದು ಖಾತರಿಯಾಗುತ್ತಿದೆ ಎಂದು ಹೇಳಿದರು.