ಸಾರಾಂಶ
ಧಾರವಾಡ:
ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ ವಿನಾಕಾರಣ ಭಯ ಹಾಗೂ ಸಂಶಯ ಪಡಬಾರದು. ಸಂಶಯ ವಿದ್ಯಾರ್ಥಿಯ ಶಕ್ತಿ ಕುಗ್ಗಿಸುತ್ತದೆ. ಶ್ರದ್ಧೆಯ ವೈರಿಯೇ ಸಂಶಯ ಎಂದು ಆರ್‌ಎಲ್‌ಎಸ್ ಪ್ರೌಢಶಾಲೆಯ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಎ.ಸಿ. ವಿರಕ್ತಮಠ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ನಗರದ ಆರ್‌ಎಲ್‌ಎಸ್ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಭಯಮುಕ್ತ ಪರೀಕ್ಷೆ ಎದುರಿಸುವುದು ಹೇಗೆ” ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯನ ನಿರತರಾದಾಗ ಅನ್ಯ ವಿಷಯಗಳು ಮನ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಶ್ರದ್ಧೆ, ಬದ್ಧತೆ, ಆತ್ಮವಿಶ್ವಾಸದಿಂದ ಖಂಡಿತ ಯಶಸ್ಸು ನಿಮ್ಮದಾಗುತ್ತದೆ. ಉತ್ಸಾಹ ಭರಿತರಾಗಿ ಪ್ರೀತಿಯಿಂದ ಓದಬೇಕು. ಓದುವುದು ಎಷ್ಟು ಮುಖ್ಯವೋ ನಿಮ್ಮ ಬರವಣಿಗೆಯು ಅಷ್ಟೇ ಮುಖ್ಯ ಎಂದ ಅವರು, ಕವಿವ ಸಂಘದ ಈ ಪ್ರಯತ್ನ ಮೆಚ್ಚಲೇಬೇಕು. ಮನವನ್ನು ಆಕರ್ಷಿಸುವ ಸಂಗತಿಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದರು.ಡಿಮ್ಹಾನ್ಸ್ ಮನೋಆರೋಗ್ಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಗೆ ಸಮಯ ಪರಿಪಾಲನೆ ಮುಖ್ಯ. ಸಮಯ ಹಣಕ್ಕಿಂತಲೂ ಶ್ರೇಷ್ಠ. ಗೃಹ ವೇಳಾಪಟ್ಟಿಯೊಂದಿಗೆ ಅಧ್ಯಯನ ಮಾಡಬೇಕು. ನಿರಂತರವಾಗಿ ಓದಬಾರದು, ಅಲ್ಪ ವಿಶ್ರಾಂತಿಯೂ ಮುಖ್ಯ. ಓದುವಾಗ ಆರೋಗ್ಯದ ಕಡೆ ಗಮನ ಹರಿಸಬೇಕು. ಹಾರ್ಡ್‌ವರ್ಕ್ ಬದಲಾಗಿ ಸ್ಮಾರ್ಟ್ ವರ್ಕ್‌ಗೆ ಆದ್ಯತೆ ಕೊಡಬೇಕು. ನಿಷ್ಪ್ರಯೋಜಕ ಹಾಳು ಹರಟೆ ಸಲ್ಲದು. ಅರ್ಥ ಮಾಡಿಕೊಂಡು ಪುನಃ ಪುನಃ ಓದುವುದರಿಂದ, ಬರೆಯುವುದರಿಂದ ಸ್ಮರಣ ಶಕ್ತಿ ಹೆಚ್ಚುವುದು ಎಂದರು.
ಪ್ರಾಚಾರ್ಯ ಸಿ.ವಿ. ಕಣಬರಗಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಜ್ಞಾನವೇ ನಿಮ್ಮ ಸಂಪತ್ತು. ಜ್ಞಾನ ಸಂಪಾದನೆಗೆ ಪ್ರಯತ್ನ, ಪರಿಶ್ರಮ ಬಹಳ ಮುಖ್ಯ. ಅಭ್ಯಾಸ ಒಂದು ತಪಸಿದ್ದಂತೆ ಎಂದು ಹೇಳಿದರು.ಉಪ ಪ್ರಾಚಾರ್ಯ ಆರ್.ಬಿ. ಬಾನಪ್ಪನವರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಎಂ.ಆರ್. ಹಿರೇಮಠ ಸ್ವಾಗತಿಸಿದರು. ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಐ.ಸಿ. ನೇಕಾರ ವಂದಿಸಿದರು. ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಪ್ರಮೀಳಾ ಜಕ್ಕಣ್ಣವರ, ಎಂ.ಎಸ್. ನರೇಗಲ್, ಎಂ.ಜಿ. ದೇವಜಿ, ವೈ.ಎಂ. ಬೊಮ್ಮನಹಳ್ಳಿ, ಬಿ.ವ್ಹಿ. ಸಾಲಿ, ಎ.ಝೆಡ್. ಸರಖಾಜಿ ಹಾಗೂ ಯುವರಾಜ ಇದ್ದರು. ಕೊನೆಯಲ್ಲಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು.