ರಾಜ್ಯದಲ್ಲಿ ಹತ್ತಾರು ಸಿಎಂ ಹುಟ್ಟಿಕೊಂಡಿದ್ದಾರೆ: ಜಗದೀಶ ಶೆಟ್ಟರ

| Published : Sep 11 2024, 01:09 AM IST / Updated: Sep 11 2024, 01:10 AM IST

ರಾಜ್ಯದಲ್ಲಿ ಹತ್ತಾರು ಸಿಎಂ ಹುಟ್ಟಿಕೊಂಡಿದ್ದಾರೆ: ಜಗದೀಶ ಶೆಟ್ಟರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ರಾಜ್ಯದಲ್ಲಿ ಇದೀಗ ಹತ್ತಾರು ಮುಖ್ಯಮಂತ್ರಿಗಳು ಹುಟ್ಟಿಕೊಂಡಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ರಾಜ್ಯದಲ್ಲಿ ಇದೀಗ ಹತ್ತಾರು ಮುಖ್ಯಮಂತ್ರಿಗಳು ಹುಟ್ಟಿಕೊಂಡಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವ್ಯಂಗ್ಯವಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಲೇ ಇದೆ. ಈವರೆಗೆ ಒಳಗೆ ನಡೆಯುತ್ತಿದ್ದ ಚರ್ಚೆ ಈಗ ಬಹಿರಂಗವಾಗಿಯೇ ನಡೆಯುತ್ತಿದೆ. ಒಳಗೆ ನಾವು ಸಿದ್ದರಾಮಯ್ಯ ಪರವಾಗಿದ್ದೇವೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ಸಚಿವರು, ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದರೂ, ತೆರೆಮರೆಯಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ವ್ಯಾಪಕವಾಗಿದೆ. ಹಾಗಾಗಿ, ಕಾಂಗ್ರೆಸ್‌ನಲ್ಲಿ ಹತ್ತಾರು ಮುಖ್ಯಮಂತ್ರಿಗಳು ಹುಟ್ಟಿಕೊಂಡಿದ್ದಾರೆ ಎಂದು ಮೂದಲಿಸಿದರು.

ಮುಡಾ, ವಾಲ್ಮೀಕಿ ನಿಗಮದ ಹಗರಣಗಳಲ್ಲಿ ರಾಜ್ಯ ಸರ್ಕಾರ ಮುಳುಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ನಿರ್ನಾಮವಾಗಲಿದೆ. ರಾಜ್ಯ ಸರ್ಕಾರ ತನ್ನ ತಪ್ಪಿನಿಂದಲೇ ಪತನಗೊಳ್ಳಲಿದೆ. ನಾವು ಆಪರೇಷನ್‌ ಕಮಲ ಮಾಡುವ ಅವಶ್ಯಕತೆಯಿಲ್ಲ. ಕಾಂಗ್ರೆಸ್‌ ಶಾಸಕರು, ಸಚಿವರೇ ಒಬ್ಬರಿಗೊಬ್ಬರು ಕಾಲು ಎಳೆದುಕೊಳ್ಳುತ್ತಿದ್ದಾರೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ದಿವಾಳಿಯಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಾಲಿಕೆಯನ್ನು ಆರ್ಥಿಕವಾಗಿ ಸುಧಾರಣೆ ಮಾಡಲು ನನ್ನಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿದೆ. ಅಧಿಕಾರಿಗಳ ಯಡವಟ್ಟಿನಿಂದ ಸಮಸ್ಯೆ ಆಗಿದೆ. ಅಧಿಕಾರಿಗಳ ಮೇಲೆ ನಿಯಂತ್ರಣ ‌ಇಲ್ಲದೆ ಇದ್ದರೆ ಈ ರೀತಿಯ ಸಮಸ್ಯೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.