ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಶಾಸಕನಾದ ನನ್ನ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ತಿಪಟೂರು ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ನೊಣವಿನಕೆರೆ ಮತ್ತು ಈಚನೂರು ಎರಡು ಕೆರೆಗಳನ್ನು ಬಳಸಿಕೊಳ್ಳಲಾಗುವುದು.ಈಗಾಗಲೇ ನೊಣವಿನಕೆರೆಯಿಂದ ನೀರು ತರಲು ಡಿಪಿಆರ್ ಸಿದ್ದಪಡಿಸಲಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ನಗರಸಭೆಯಲ್ಲಿ ಶಾಸಕರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರು ನಗರಕ್ಕೆ ೨ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ಕಾರದ ತಾಂತ್ರಿಕ ತಜ್ಞರ ವರದಿಯಂತೆ ಪರಿಶೀಲನೆ ನಡೆಸಿ ನೊಣವಿನಕೆರೆಯಿಂದ ನೀರು ತರಲು 75ಕೋಟಿ ರು. ವೆಚ್ಚದ ಡಿಪಿಆರ್ ಸಿದ್ಧಪಡಿಸಲಾಗಿದೆ. ತಿಪಟೂರು ನಗರ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು ಒಂದು ಲಕ್ಷ ಜನಸಂಖ್ಯೆಯನ್ನು ದಾಡುತ್ತಿದೆ. ಪ್ರ್ರತಿದಿನ ನಗರದ ಜನರ ಕುಡಿಯುವ ನೀರಿಗೆ 140 ರಿಂದ 160 ಎಂಸಿಎಫ್‌ಟಿ ನೀರು ಬೇಕು. ಈಚನೂರು ಕೆರೆ ಕುಡಿಯುವ ನೀರಿನ ಸಾಮರ್ಥ್ಯ 30ಎಂಸಿಎಫ್‌ಟಿ ಆಗಿದ್ದು, ನೊಣವಿನಕೆರೆ ನೈಸರ್ಗಿಕವಾಗಿ 350 ಎಂಸಿಎಫ್‌ಟಿ ನೀರಿನ ಸಾಮರ್ಥ್ಯ ಹೊಂದಿದೆ. ನೊಣವಿನಕೆರೆ ಅಚ್ಚುಕಟ್ಟು ಭಾಗದ ರೈತರಿಗೆ 195 ಎಂಸಿಎಫ್‌ಟಿ ನೀರು ಉಪಯೋಗವಾದರೆ ಉಳಿದ ಎಂಸಿಎಫ್‌ಟಿ ನೀರು ತಿಪಟೂರು ನಗರದ ಕುಡಿಯುವ ನೀರಿನ ಯೋಜನೆಗೆ ದೊರೆಯುತ್ತದೆ. ಈ ಯೋಜನೆಯಿಂದ ನೊಣವಿನಕೆರೆ ಭಾಗದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಗರದ ಜನರಿಗೂ ಶಾಶ್ವತ ಕುಡಿಯುವ ನೀರು ಸಿಗಲಿದೆ ಎಂದರು. ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ನಿವೇದನೆ ಮಾಡಿಕೊಂಡಿದ್ದೆ, ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೌರಾಡಳಿತ ಸಚಿವರು ಹಾಗೂ ಅಧಿಕಾರಿಗಳು ಸಭೆ ನಡೆಸಿ ತಾಂತ್ರಿಕ ತಜ್ಞರ ಸಲಹೆಯಂತೆ ಯೋಜನೆ ರೂಪಿಸಿದ್ದು, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಲಾಗುವುದು. ತಿಪಟೂರು ನಗರದ ಅಮಾನೀಕೆರೆ ಪುರಾತನ ಕೆರೆಯಾಗಿದ್ದು, ಕೆರೆ ಏರಿ ಶಿಥಿಲಾವಸ್ಥೆ ತಲುಪಿದ್ದು ಕೆರೆಯ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೃಷ್ಣರಾಜ ಸಾಗರ ತಾಂತ್ರಿಕ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿ ಏರಿ ದುರಸ್ತಿಗೆ ಸೂಚನೆ ನೀಡಿರುವ ಕಾರಣ, 5 ಕೋಟಿ ರು. ವೆಚ್ಚದಲ್ಲಿ ದುರಸ್ಥಿ ಕೈಗೊಳ್ಳುತ್ತಿದ್ದು, ದುರಸ್ಥಿಯ ನಂತರ ತಿಪಟೂರು ಅಮಾನಿಕೆರೆ ನೀರು ಹರಿಸಲಾಗುವುದು ಎಂದರು. ನಗರಸಭೆ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮಾತನಾಡಿ, ತಿಪಟೂರು ನಗರಕ್ಕೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಮಾನ್ಯ ಸಭೆ ನಿರ್ಣಯದಂತೆ ಸರ್ಕಾರ ತಜ್ಞರ ಅಭಿಪ್ರಾಯದಂತೆ ನೊಣವಿನಕೆರೆಯಿಂದ ಕುಡಿಯುವ ನೀರಿನ ಯೋಜನೆ ರೂಪಿಸಿದೆ. ಈಗಾಗಲೇ ನಗರದಲ್ಲಿ 5ಕೋಟಿ ರು.ವೆಚ್ಚದಲ್ಲಿ 36ಬೋರ್‌ವೆಲ್ ಕೊರೆಸಲಾಗಿದ್ದು 19 ಕಿ.ಮೀ ಪೈಪ್‌ಲೈನ್ ಮಾಡಲಾಗಿದೆ. ನಗರದಲ್ಲಿ ಒಳಚರಂಡಿ ಯೋಜನೆಯನ್ನು ಅಪ್‌ಗ್ರೇಡ್ ಮಾಡಲಾಗಿದ್ದು ಈಡೇನಹಳ್ಳಿ ಹಾಗೂ ಗೊರಗೊಂಡನಹಳ್ಳಿ ವೆಟ್‌ವೆಲ್‌ನಲ್ಲಿ ಶೇಖರಣೆ ಮಾಡಿ ಅಲ್ಲಿಂದ ಕಲ್ಲೇಗೌಡನಪಾಳ್ಯ ಸಂಸ್ಕರಣ ಘಟಕದಲ್ಲಿ ಸಂಸ್ಕರಣೆ ಮಾಡುವುದು ಹಾಗೂ ಯುಜಿಡಿ ಸಂಪರ್ಕದಿಂದ ಬಿಟ್ಟಿರುವ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಪೈಪ್‌ಲೈನ್ ನಿರ್ಮಾಣ ಹಾಗೂ 3 ಎಂ.ಎಲ್.ಡಿ ತೊಟ್ಟಿ ನಿರ್ಮಾಣ ಮಾಡಿ ಸಂಸ್ಕರಣೆ ಮಾಡುವ ಕಾಮಗಾರಿ ಅನುಮೋದನೆ ಹಂತದಲ್ಲಿ ಎಂದು ತಿಳಿಸಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್, ಸಣ್ಣ ನೀರಾವರಿ ಇಲಾಖೆ ದೊಡ್ಡಯ್ಯ ಮತ್ತಿತರರಿದ್ದರು.