ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜೆಎಸ್ಸೆಸ್‌ ಸಂಸ್ಥೆಯನ್ನು ಬೆಳೆಸಿ, ಈ ಮೂಲಕ ಶಿಕ್ಷಣದ ಮಹತ್ವವನ್ನು ಸಾರಿದವರು ಡಾ. ಅಜಿತ ಪ್ರಸಾದ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜೆಎಸ್ಸೆಸ್‌ ಸಂಸ್ಥೆಯನ್ನು ಬೆಳೆಸಿ, ಈ ಮೂಲಕ ಶಿಕ್ಷಣದ ಮಹತ್ವವನ್ನು ಸಾರಿದವರು ಡಾ. ಅಜಿತ ಪ್ರಸಾದ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿಯ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯಲ್ಲಿ ಭಾನುವಾರ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅವರ ಅಮೃತ ಮಹೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದ ಅವರು, ಬರೀ ಸಂಸ್ಥೆಗಳನ್ನು ಕಟ್ಟುವುದು ಮುಖ್ಯವಲ್ಲ. ಅದಕ್ಕೆ ಯಾವುದೇ ಚ್ಯುತಿ ಬರದಂತೆ ಜತನದಿಂದ ಕಾಪಾಡಿಕೊಂಡು ಹೋಗುವುದು ಮುಖ್ಯ. ಸಂಸ್ಥೆಯ ಕಷ್ಟ-ಸುಖಗಳಲ್ಲಿ ನಿಂತು ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಇನ್ನೂ ಮುಖ್ಯ. ಈ ಕೆಲಸ ಸಮಾಜದ ಪ್ರತಿಯೊಂದು ರಂಗದಲ್ಲೂ ಉತ್ತಮ ಬಾಂಧವ್ಯ ಹಾಗೂ ಒಳ್ಳೆಯ ವ್ಯಕ್ತಿತ್ವ ಹೊಂದಿದವರಿಂದ ಮಾತ್ರ ಸಾಧ್ಯ. ಅದನ್ನು ಡಾ. ಅಜಿತ ಪ್ರಸಾದ ಅವರು ಮಾಡಿ ತೋರಿಸಿದ್ದಾರೆ ಎಂದು ಶ್ಲಾಘಿಸಿದರು.

ನಂತರ ಡಾ. ಅಜಿತ ಪ್ರಸಾದ ಅವರ ಅಭಿನಂದನಾ ಗ್ರಂಥ “ಸುಮೇರು” ಬಿಡುಗಡೆ ಮಾಡಿದ ಹೊರಟ್ಟಿ ಅವರು, ಸಂಸ್ಥೆ ನಡೆಸಲು ಧೈರ್ಯ, ಛಲ, ತಾಳ್ಮೆ, ಸಮಯಪ್ರಜ್ಞೆ ಮುಂತಾದ ಗುಣಗಳನ್ನು ಹೊಂದಿರಬೇಕು. ಡಾ. ಅಜಿತ ಪ್ರಸಾದರಲ್ಲಿ ನಾವು ಸ್ಪಷ್ಟವಾಗಿ ಅವುಗಳನ್ನು ಕಾಣಬಹುದು. ಹೀಗಾಗಿ, ವಜ್ರಕುಮಾರರ ನಂತರ ಸಂಸ್ಥೆಯ ಜವಾಬ್ದಾರಿಯನ್ನು ವೀರೇಂದ್ರ ಹೆಗ್ಗಡೆ ಅವರು ಡಾ. ಅಜಿತ ಪ್ರಸಾದ ಅವರ ಕೈಗೆ ಹಸ್ತಾಂತರಿಸಿದರು. ಅವರ ಆಶಯದಂತೆ ಸಂಸ್ಥೆಯನ್ನು ಡಾ. ಅಜಿತ ಪ್ರಸಾದ 53 ವರ್ಷಗಳ ದೀರ್ಘ ಕಾಲ ಮುನ್ನಡೆಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡುತ್ತಿದ್ದಾರೆ ಎಂದರು.

ಗ್ರಾಮ ಭಾರತ ಪತ್ರಿಕೆಯನ್ನು ಬಿಡುಗಡೆ ಮಾಡಿದ ಶಾಸಕ ಅರವಿಂದ ಬೆಲ್ಲದ, ಡಾ. ಅಜಿತ ಪ್ರಸಾದ ಕೇವಲ ಸಂಸ್ಥೆಗೆ ಮಾತ್ರ ಸೀಮಿತವಿರದೇ ಸಮಾಜದ ಪ್ರಗತಿಯಲ್ಲೂ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ ಎಂದರು.

ಹು-ಧಾ ಮಹಾಪೌರರಾದ ಜ್ಯೋತಿ ಪಾಟೀಲ್, ಡಾ. ಅಜಿತ ಪ್ರಸಾದ ಅವರ ತಾಳ್ಮೆ ಮತ್ತು ದಕ್ಷತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕುವ ನಿಟ್ಟಿನಲ್ಲಿ ಅಜಿತ್‌ ಪ್ರಸಾದ ಅವರು ಕೇವಲ ಪಠ್ಯವಷ್ಟೆ ಅಲ್ಲದೇ, ಪಠ್ಯೇತರ ಚಟುವಟಿಕೆಗೂ ಮನ್ನಣೆ ನೀಡಿ ಅವರ ಶ್ರೇಯೋಭಿವೃದ್ಧಿಗೆ ಕಾರಣವಾಗಿದ್ದಾರೆ ಎಂದರು.

ಅಭಿನಂದನಾ ಸನ್ಮಾನ ಸ್ವೀಕರಿಸಿದ ಡಾ. ಅಜಿತ ಪ್ರಸಾದ, 1944ರಲ್ಲಿ ಸ್ಥಾಪನೆಯಾದ ಜೆಎಸ್‌ಎಸ್‌ ನಡೆದು ಬಂದ ದಾರಿ, ಮಾರ್ಗದರ್ಶಕರಾಗಿದ್ದ ಡಾ. ವೀರೇಂದ್ರ ಹೆಗ್ಗಡೆ, ಡಾ. ನ. ವಜ್ರಕುಮಾರ ಮತ್ತು ಅನೇಕ ಹಿರಿಯ ಉಪನ್ಯಾಸಕರ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು. ಸಂಸ್ಥೆಯ ಅಭಿವೃದ್ಧಿಯ ವಿಚಾರವಾಗಿ ಯಾವುದೇ ಹಿಂಜರಿಕೆ ಬೇಡ, ಜತೆಗೆ ನಾನಿದ್ದೇನೆ ಎಂಬ ಖಾವಂದರ ಭರವಸೆ, ನಾನು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯಲು ಪ್ರೇರಣೆಯಾಯಿತು ಎಂದರು.

ಮಾಜಿ ಸಂಸದ ಐ.ಜಿ. ಸನದಿ, ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಅಥಣಿಯ ಮೋಟಗಿ ಮಠದ ಚನ್ನಬಸವ ಸ್ವಾಮೀಜಿ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಕೃವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ್, ಶ್ರೀಕಾಂತ ಕೆಮ್ತೂರ, ಜೀವಂಧರಕುಮಾರ, ಚಂದ್ರಕಾಂತ ಬೆಲ್ಲದ ಇದ್ದರು. ಆರಂಭದಲ್ಲಿ ಜೆಎಸ್‌ಎಸ್‌ ಆವರಣದ ಮುಂಭಾಗದಿಂದ ಸನ್ನಿಧಿ ಕಲಾಕ್ಷೇತ್ರದ ವರೆಗೆ ಡಾ. ಅಜಿತ ಪ್ರಸಾದ ದಂಪತಿಯನ್ನು ಸಾರೋಟದಲ್ಲಿ ಮೆರವಣಿಗೆ ಮಾಡಲಾಯಿತು.

ಡಾ. ಸೂರಜ ಜೈನ್ ಸ್ವಾಗತಿಸಿದರು. ಮಹಾವೀರ ಉಪಾದ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನ್ನಪ್ಪ ಕುಂದಗೋಳ ವಂದಿಸಿದರು.