ಸಮಾಜದಲ್ಲಿ ಸಮಾನತೆ ಪ್ರತಿಪಾದಿಸಿ ಡಾ.ಅಂಬೇಡ್ಕರ್‌

| Published : Apr 16 2025, 12:33 AM IST

ಸಾರಾಂಶ

ಡಾ.ಅಂಬೇಡ್ಕರ್ ಕನಸು ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕೆಂಬುದು ಆಗಿತ್ತು. ಮಹಿಳೆಯರಿಗೂ ಸಮಾನ ಶಿಕ್ಷಣ, ಗೌರವ ಹಾಗೂ ಅವಕಾಶಗಳು ಸಿಗಬೇಕು ಎಂಬ ಅವರ ದೃಷ್ಟಿಕೋನವನ್ನು ಈಗಿನ ಸರ್ಕಾರ ಹಂತ ಹಂತವಾಗಿ ಸಾಕಾರಗೊಳಿಸುತ್ತಿದೆ. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿದ್ದಾರೆ,

ಕನ್ನಡಪ್ರಭ ವಾರ್ತೆ ಕೋಲಾರಅಂಬೇಡ್ಕರ್ ಬಾಲ್ಯದಲ್ಲಿಯೇ ಜಾತಿ ವ್ಯವಸ್ಥೆಯ ನೋವನ್ನು ಅನುಭವಿಸಿ, ಅದನ್ನು ಮೆಟ್ಟಿ ಉನ್ನತ ಶಿಕ್ಷಣವನ್ನು ಪಡೆದಿದ್ದು ನಿಜಕ್ಕೂ ದೊಡ್ಡ ಸಾಧನೆ. ತಮ್ಮ ಈ ಅನುಭವದ ಆಧಾರದಲ್ಲಿ ಅವರು ಭಾರತೀಯ ಸಂವಿಧಾನ ರಚನೆಯಲ್ಲಿ ಅನೇಕ ಸುಧಾರಣೆಗಳನ್ನು ತಂದು ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ಧ್ಯೇಯದೊಂದಿಗೆ, ಅವರು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯಕ್ಕೆ ಬಲ ನೀಡುವ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದರು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಹೇಳಿದರು.ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ೧೩೪ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.ಮಹಿಳೆಗೂ ಸಮಾನ ಅ‍ವಕಾಶ

ಅಂಬೇಡ್ಕರ್ ಕನಸು ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕೆಂಬುದು ಆಗಿತ್ತು. ಮಹಿಳೆಯರಿಗೂ ಸಮಾನ ಶಿಕ್ಷಣ, ಗೌರವ ಹಾಗೂ ಅವಕಾಶಗಳು ಸಿಗಬೇಕು ಎಂಬ ಅವರ ದೃಷ್ಟಿಕೋನವನ್ನು ಈಗಿನ ಸರ್ಕಾರ ಹಂತ ಹಂತವಾಗಿ ಸಾಕಾರಗೊಳಿಸುತ್ತಿದೆ. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿದ್ದಾರೆ, ಇದು ಅಂಬೇಡ್ಕರ್ ಅವರ ಬಹುದೊಡ್ಡ ಕೊಡುಗೆ ಎಂದರು.ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, "ಅಂಬೇಡ್ಕರ್ ತಾವು ಅನುಭವಿಸಿದ ಅಸಮಾನತೆಗಳನ್ನು ನಿಭಾಯಿಸಿ, ಎಲ್ಲರ ಸಮಾನತೆಯಿಗಾಗಿ ತಮ್ಮ ಜೀವನವನ್ನು ಅರ್ಪಿಸಿದ ಮಹಾನ್ ವ್ಯಕ್ತಿ. ಅವರ ಪುಸ್ತಕ ಓದುವ ಅಭ್ಯಾಸ ಎಷ್ಟರಮಟ್ಟಿಗೆ ಇತ್ತು ಎಂದರೆ ತಮ್ಮ ಮನೆಯಲ್ಲಿಯೇ ೫೦,೦೦೦ಕ್ಕೂ ಅಧಿಕ ಗ್ರಂಥಗಳ ಸಂಗ್ರಹಣೆಯ ಗ್ರಂಥಾಲಯವಿತ್ತು ಎಂದು ಹೇಳಿದರು.ಡಾ.ಕುಪ್ಪನಹಳ್ಳಿ ಭೈರಪ್ಪ ಉಪನ್ಯಾಸಕರಾಗಿ ಮಾತನಾಡಿ, "ಇಂದಿನ ಜನರು ಅಂಬೇಡ್ಕರ್‌ವಾದಿಗಳೆಂದು ಹೇಳಿಕೊಳ್ಳುವುದಕ್ಕಿಂತ ಅವರ ತತ್ವಗಳನ್ನು ಪಾಲಿಸುವದು ಮುಖ್ಯ. ಮೀಸಲಾತಿಯ ಹಕ್ಕನ್ನು ಪಡೆದಿರುವವರು ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿರಲು ಮುಖ್ಯ ಕಾರಣ ಅಂಬೇಡ್ಕರ್ " ಎಂದರು.ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ನಿಲಯಗಳ ಅಧಿಕಾರಿಗಳಿಗೂ ಗೌರವ ಸೂಚಿಸಲಾಯಿತು.ಶಾಸಕ ಕೊತ್ತೂರು ಮಂಜುನಾಥ್, ಎಡಿಸಿ ಮಂಗಳ, ಜಿಪಂ ಸಿಇಓ ಡಾ.ಪ್ರವೀಣ್. ಪಿ.ಬಾಗೇವಾಡಿ, ಎಸ್‌ಪಿ ಡಾ.ಬಿ.ನಿಖಿಲ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ಇದ್ದರು.ಶಾಸಕರ ವಿರುದ್ಧ ಘೋಷಣೆ ಜಿಲ್ಲಾಡಳಿತದಿಂದ ಅಂಬೇಡ್ಕರ್ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದಲಿತ ಮುಖಂಡ ಬೀರಮಾನಹಳ್ಳಿ ಆಂಜಿ ಧಿಕ್ಕಾರ ಕೂಗಿದರು. ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಒಐಂ ಆಗಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಅವರನ್ನು ಗಲ್‌ಪೇಟೆ ಪೊಲೀಸರು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡು ಹೋದರು.