ಭಾರತದ ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್ ಅವರು ಹಗಲಿರುಳು ದುಡಿದಿದ್ದಾರೆ. ಭಾರತದ ಎಲ್ಲ ವರ್ಗದ ಕಟ್ಟ ಕಡೆಯ ಜನರಿಗೂ ಸಂವಿಧಾನದ ಸೌಲಭ್ಯಗಳು ತಲುಪುವಲ್ಲಿ ಶ್ರಮಿಸಿದ್ದಾರೆ.

ಶಿರಹಟ್ಟಿ: ಆಧುನಿಕ ಭಾರತವನ್ನು ಪುನರ್ ರೂಪಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಹಿಂಸಾವಾದಿ ಹಾಗೂ ತತ್ವಜ್ಞಾನಿಯಾಗಿದ್ದರು. ದೇಶದ ಪ್ರತಿ ಪ್ರಜೆ ಅವರ ವಿಚಾರ ಮತ್ತು ಬಹುರೂಪಿ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಎಲ್ಲ ವರ್ಗಗಳ ಹಾಗೂ ಶೋಷಿತ ಸಮುದಾಯಗಳ ಏಳಿಗೆಗೆ ನಿರಂತರ ಶ್ರಮಿಸಿದ್ದಾರೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್‌ ತಿಳಿಸಿದರು.ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಅಂಬೇಡ್ಕರ್ ಅವರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡುವುದರ ಮೂಲಕ ಹಾಗೂ ತಹಸೀಲ್ದಾರ್ ಕಾರ್ಯಾಲಯದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತದ ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್ ಅವರು ಹಗಲಿರುಳು ಶ್ರಮಿಸಿದ್ದಾರೆ. ಭಾರತದ ಎಲ್ಲ ವರ್ಗದ ಕಟ್ಟ ಕಡೆಯ ಜನರಿಗೂ ಸಂವಿಧಾನದ ಸೌಲಭ್ಯಗಳು ತಲುಪುವಲ್ಲಿ ಶ್ರಮಿಸಿದ್ದಾರೆ ಎಂದರು.

ಮುಖಂಡ ನಾಗರಾಜ ಲಕ್ಕುಂಡಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಅವರು ಅಸಮಾನತೆಯು ತಾಂಡವವಾಡುತ್ತಿದ್ದ ಕಾಲದಲ್ಲಿ ತಾನು ಅನುಭವಿಸಿದ ನೋವು, ಯಾತನೆಗಳು ಮುಂದಿನ ಜನಾಂಗಕ್ಕೆ ಸಿಗಬಾರದು ಅನ್ನುವ ದೃಷ್ಟಿಯಿಂದ ನಿರಂತರವಾಗಿ ಅಧ್ಯಯನ ಮಾಡಿ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯದ ವಿರುದ್ಧ ಹೋರಾಡಿ, ಪ್ರತಿಯೊಬ್ಬರ ಹಕ್ಕುಗಳಿಗಾಗಿ ನ್ಯಾಯ ಒದಗಿಸಿ ಕೊಟ್ಟರು ಎಂದರು.

ಮುಖಂಡರಾದ ಜಾನು ಲಮಾಣಿ, ಡಿ.ಕೆ. ಹೊನ್ನಪ್ಪನವರ, ಗೋವಿಂದಪ್ಪ ಬಾಗೇವಾಡಿ, ಈರಣ್ಣ ಚವ್ಹಾಣ, ತಿಪ್ಪಣ್ಣ ಲಮಾಣಿ, ರಾಜು ಶಿರಹಟ್ಟಿ, ಮಾಬೂಸಾಬ ಲಕ್ಷ್ಮೇಶ್ವರ, ಆನಂದ ಕೋಳಿ, ಖಜಾನೆ ಇಲಾಖೆಯ ಶಿವಪ್ಪ ಹದ್ಲಿ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ, ನೋಂದಣಿ ಇಲಾಖೆಯ ಶರಣಪ್ಪ ಪವಾರ, ಮಲ್ಲಿಕಾರ್ಜುನ ಪಾಟೀಲ, ಆಸ್ಮಾ ಸುರಪೂರ, ಗಿರಿಜಾ ಪೂಜಾರ, ರಂಗಪ್ಪ ಕಾಂಬ್ಳೆ ಸೇರಿ ಅಂಬೇಡ್ಕರ ನಗರದ ಸಾರ್ವಜನಿಕರು ಉಪಸ್ಥಿತರಿದ್ದರು.