ಸಾರಾಂಶ
- ಅಂಬೇಡ್ಕರ್ ಭವನದಲ್ಲಿ ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಅಂಬೇಡ್ಕರ್ ಜಯಂತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮುನ್ನ ಮುಂದಿನ 100 ವರ್ಷದ ಭಾರತ ಹೇಗಿರಬೇಕು ಎಂಬ ಚಿಂತನೆ ಮಾಡಿದ್ದರು ಎಂದು ಮೈಸೂರಿನ ಎಟಿಐ ಆಡಳಿತ ತರಬೇತಿ ಸಂಸ್ಥೆ ಬೋಧಕ ಡಾ.ಅಬ್ದುಲ್ ವಹಾಬ್ ತಿಳಿಸಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಪಂ, ಪಪಂ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಾಬು ಜಗಜೀವನ ರಾಂ 118 ನೇ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ 134 ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಡಾ.ಅಂಬೇಡ್ಕರ್ ಮುಂದಿನ ಭವಿಷ್ಯದ ದೃಷ್ಟಿಯಿಂದ ಸಂವಿಧಾನ ರಚಿಸಿದ್ದರು. ಡಾ.ಬಾಬು ಜಗಜೀವನ ರಾಂ ಸಂವಿಧಾನವನ್ನು ಕಾರ್ಯಗತಗೊಳಿಸಿದ್ದರು. ಇಬ್ಬರು ದೇಶದ ಸ್ವಾಭಿಮಾನದ ಸಂಕೇತ ವಾಗಿದ್ದಾರೆ. 1956 ರ ಡಿ. 6 ರಂದು ಡಾ.ಅಂಬೇಡ್ಕರ್ ತೀರಿಕೊಂಡಾಗ ಜಗತ್ತಿನ 148 ರಾಷ್ಟ್ರಗಳು ತಮ್ಮ ದೇಶದ ದ್ವಜ ವನ್ನು ಕೆಳಗೆ ಇಳಿಸಿ ಗೌರವ ಸಲ್ಲಿಸಿದ್ದರು ಎಂದು ಸ್ಮರಿಸಿದರು.ಹಸಿರು ಕ್ರಾಂತಿ ನೇಕಾರ ಬಾಬು ಜಗಜೀವನ ರಾಂ ಸಮಾಜ ಕಲ್ಯಾಣ ಇಲಾಖೆಯನ್ನು ಹುಟ್ಟು ಹಾಕಿ ದಲಿತರಿಗೆ, ಹಿಂದುಳಿದವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸಿದ್ದರು. ತಮ್ಮ ಜೀವಿತದ ಅವದಿಯಲ್ಲಿ ಒಮ್ಮೆಯೂ ಚುನಾವಣೆಯಲ್ಲಿ ಸೋತಿರಲಿಲ್ಲ ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ಜಗತ್ತಿನಲ್ಲೇ ಡಾ.ಅಂಬೇಡ್ಕರ್ ಬರೆದ ಸಂವಿಧಾನವೇ ದೊಡ್ಡ ಸಂವಿದಾನ. ಭಾರತದ ಸಂವಿಧಾನವನ್ನು ಇಡೀ ಜಗತ್ತೇ ಗೌರವಿಸಿದೆ. ಅವರು ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದರು.ಸಮ, ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ್ದರು ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷೆ ಜುಬೇದ ಮಾತನಾಡಿ, ದೇಶದ ಕಟ್ಟ ಕಡೆ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಎಂಬುದು ಡಾ.ಅಂಬೇಡ್ಕರ್ ಆಶಯವಾಗಿತ್ತು. ದಲಿತರು ಒಗ್ಗಟ್ಟಾಗಿರಬೇಕು. ಇತ್ತೀಚಿನ ವರ್ಷಗಳಲ್ಲಿ ದಲಿತ ಮುಖಂಡರು ಬೇರೆ, ಬೇರೆ ಸಂಘಟನೆ ಹುಟ್ಟು ಹಾಕಿದ್ದಾರೆ. ಎಲ್ಲರೂ ಒಟ್ಟಾಗಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಅತಿಥಿಗಳು ಬಾಬು ಜಗಜೀವನರಾಂ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಅತಿಥಿಗಳಾಗಿ ತಹಸೀಲ್ದಾರ್ ತನುಜಾ ಟಿ.ಸವದತ್ತಿ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್, ಪಪಂ ಉಪಾಧ್ಯಕ್ಷೆ ಉಮಾ ಕೇಶವ, ಸದಸ್ಯರಾದ ಮುಕಂದ, ಸುರೈಯಾಭಾನು,ಕೆಡಿಪಿ ಸದಸ್ಯ ಕೆ.ವಿ.ಸಾಜು,ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಕೊಪ್ಪ ಎಪಿಎಂಸಿ ಸದಸ್ಯ ಕೆ.ಎಂ.ಶಿವಣ್ಣ, ಡಿ.ಎಸ್.ಎಸ್.ಮುಖಂಡರಾದ ಡಿ.ರಾಮು, ವಾಲ್ಮೀಕಿ ಶ್ರೀನಿವಾಸ್, ಮಂಜುನಾಥ್,ಪೊಲೀಸ್ ವೃತ್ತ ನಿರೀಕ್ಷಿಕ ಗುರುದತ್ ಕಾಮತ್, ಪೊಲೀಸ್ ಠಾಣಾಧಿಕಾರಿ ನಿರಂಜನ ಗೌಡ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ನಿರಂಜನ ಮೂರ್ತಿ ಇದ್ದರು.