ಡಾ. ಅಂಬೇಡ್ಕರ್‌ ಶ್ರೇಷ್ಠ ಮಾನವತಾವಾದಿ: ಕೆ.ರಾಮರಾಜನ್‌

| Published : Feb 22 2024, 01:52 AM IST

ಸಾರಾಂಶ

ಸಂವಿಧಾನ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲೆಯಲ್ಲಿ ಕಳೆದ 27 ದಿನಗಳಿಂದ ಹಮ್ಮಿಕೊಂಡಿರುವ ಜಾಗೃತಿ ಜಾಥಾ ಅಭಿಯಾನದ ‘ಸ್ತಬ್ಧಚಿತ್ರ’ ಒಳಗೊಂಡ ವಾಹನವನ್ನು ಬುಧವಾರ ನಗರದ ರಾಜಾಸೀಟಿನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳು ಸೇರಿದಂತೆ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳು ಒಳಗೊಂಡು ಕಳೆದ 27 ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ನಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಇಡೀ ವಿಶ್ವದಲ್ಲಿ ಭಾರತವು ಶ್ರೇಷ್ಠ ಸಂವಿಧಾನ ಹೊಂದಿದ್ದು, ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಸಂವಿಧಾನ ಜಾಗೃತಿ ಜಾಥಾ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಹಾಗೂ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತದ ಪ್ರಜೆಗಳಾದ ಪ್ರತಿಯೊಬ್ಬರೂ ಸಮನಾಗಿ ಬದುಕುವ ಹಕ್ಕು ಹೊಂದಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಪ್ರತಿ ಕ್ಷೇತ್ರದಲ್ಲೂ ಸಹ ಸಮಾನ ಅವಕಾಶವನ್ನು ಹೊಂದಿದ್ದಾರೆ ಎಂದು ಹೇಳಿದರು.

ಸಂವಿಧಾನದಡಿ ಪ್ರತಿಯೊಬ್ಬರೂ ಸಮಾನರಾಗಿದ್ದು, ಬಡವ-ಬಲ್ಲಿದ, ಮೇಲು-ಕೀಲು ಎಂಬುದಿಲ್ಲ. ರಾಷ್ಟ್ರದಲ್ಲಿ ಯಾರೂ ಸಹ ಅಸಮಾನತೆ ಹೊಂದಿರಬಾರದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ. ಅವರೊಬ್ಬ ಬಹುಮುಖ ಪ್ರತಿಭೆ ವ್ಯಕ್ತಿತ್ವ ಹೊಂದಿರುವ ಸಮತಾವಾದಿ, ಸಂವಿಧಾನ ಶಿಲ್ಪಿ ಎಂದರು.

ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪುರುಷರಂತೆ ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಿರುವುದು ಸಂವಿಧಾನ ಮಹತ್ವವನ್ನು ತಿಳಿಸುತ್ತದೆ. ಎಲ್ಲರೂ ವಿದ್ಯಾವಂತರಾದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿಯ ದಿವಾಕರ ಮಾತನಾಡಿ, ಭಾರತ ಸಂವಿಧಾನವು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವ, ಎಲ್ಲರನ್ನು ಒಳಗೊಂಡಿದೆ ಎಂದರು.

ನಗರಸಭೆ ಸದಸ್ಯ ಮನ್ಸೂರ್ ಮಾತನಾಡಿ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವ್ಯಕ್ತಿ ಹೊಂದಿದ್ದು, ಸಮಾನ ಅವಕಾಶವನ್ನು ಸಂವಿಧಾನ ಒಳಗೊಂಡಿದೆ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‌ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಭಾರತ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಒದಗಿಸಿದೆ. ಆ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಅರಿವು ಮೂಡಿಸಿದೆ ಎಂದು ಹೇಳಿದರು. ನಿರ್ವಾಣಪ್ಪ ಮಾತನಾಡಿ ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ನಮ್ಮ ಸಂವಿಧಾನ ರಚನೆಯ ಹಿಂದೆ ಶ್ರೇಷ್ಠ ಮಾನವತಾವಾದಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಅಪರಿಮಿತವಾಗಿದೆ ಎಂದರು.

ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜೆ.ದಿವಾಕರ, ತಹಸೀಲ್ದಾರ್ ಪ್ರವೀಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನಗರಸಭೆ ಸದಸ್ಯ ಬಶೀರ್, ಸ್ಕೌಟ್ಸ್ ಮತ್ತು ಗೈಡ್ಸ್‌ ಕಾರ್ಯದರ್ಶಿ ಬೊಳ್ಳಜ್ಜೀರ ಅಯ್ಯಪ್ಪ, ಹೊನ್ನಪ್ಪ, ಕಲಾವಿದ ರಾಜು ಮತ್ತು ತಂಡದವರು ಅಂಬೇಡ್ಕರ್ ಕುರಿತು ಕ್ರಾಂತಿ ಗೀತೆ ಹಾಡಿದರು. ನಗರಸಭೆ ಪೌರಾಯುಕ್ತ ವಿಜಯ್ ಸ್ವಾಗತಿಸಿದರು, ಬಾಲಕೃಷ್ಣ ರೈ ವಂದಿಸಿದರು. ಪೂರ್ಣಕುಂಭದೊಂದಿಗೆ ಸ್ವಾಗತ: ಸಂವಿಧಾನ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲೆಯಲ್ಲಿ ಕಳೆದ 27 ದಿನಗಳಿಂದ ಹಮ್ಮಿಕೊಂಡಿರುವ ಜಾಗೃತಿ ಜಾಥಾ ಅಭಿಯಾನದ ‘ಸ್ತಬ್ಧಚಿತ್ರ’ ಒಳಗೊಂಡ ವಾಹನವನ್ನು ಬುಧವಾರ ನಗರದ ರಾಜಾಸೀಟಿನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ನಗರದ ರಾಜಾಸೀಟು ಉದ್ಯಾನವನ ಬಳಿಯಿಂದ ಹೊರಟ ಸಂವಿಧಾನ ಜಾಗೃತಿ ಅಭಿಯಾನದ ಸ್ತಬ್ಧಚಿತ್ರ ಒಳಗೊಂಡಂತೆ ಮೆರವಣಿಗೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಆಟೋ ಚಾಲಕರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಗುಂಪುಗಳು ಇತರರು ಪಾಲ್ಗೊಂಡಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಪೌರಾಯುಕ್ತ ವಿಜಯ್, ಸ್ಕೌಟ್ಸ್ ಮತ್ತು ಗೈಡ್ಸ್‌ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಣಿ ಮಾಚಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್‌ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ದಲಿತ ಸಂಘರ್ಷ ಸಮಿತಿಯ ಸಂಘಟಕರಾದ ಎಚ್.ಎಲ್.ದಿವಾಕರ, ನಿರ್ವಾಣಪ್ಪ, ಹೊನ್ನಪ್ಪ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಾಥಾ ರಾಜಾಸೀಟು ಬಳಿಯಿಂದ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಮೂಲಕ ಕಾವೇರಿ ಕಲಾಕ್ಷೇತ್ರಕ್ಕೆ ಆಗಮಿಸಿತು.

ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳು ಸೇರಿದಂತೆ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳು ಒಳಗೊಂಡು ಕಳೆದ 27 ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ನಡೆದಿದೆ.