ಸಾರಾಂಶ
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉದ್ಘಾಟಿಸಿದ ಸಚಿವ ಸಂತೋಷ ಲಾಡ್
ಕನ್ನಡಪ್ರಭ ವಾರ್ತೆ ಧಾರವಾಡಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ, ಕೊಡುಗೆಗಳು, ವಿಶೇಷವಾಗಿ ಅವರು ಸಂವಿಧಾನ ರಚಿಸಿರುವುದು ರಾಷ್ಟ್ರಕ್ಕೆ ನೀಡಿದ ಬಹುದೊಡ್ಡ ಕೊಡುಗೆ. ಭೂಮಿಯ ಮೇಲೆ ಸೂರ್ಯ- ಚಂದ್ರರು ಇರುವ ವರೆಗೂ ಅವರ ಹೆಸರು ಶಾಶ್ವತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರರನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವ ಪ್ರಯತ್ನವಾಗುತ್ತಿದೆ. ಆದರೆ, ಅವರು ಜಾತಿ, ಧರ್ಮಗಳನ್ನು ಮೀರಿ ನಿಂತ ಮಹಾನ್ ನಾಯಕ. ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಮತ್ತು ಗೌರವಯುತ ಬದುಕು ಸಿಕ್ಕಿದ್ದು ಅವರಿಂದ ಎಂಬುದು ಮರೆಯಬಾರದು. ಅವರ ಶೈಕ್ಷಣಿಕ ಸಾಧನೆ, ಚಿಂತನೆಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವಾಗಬೇಕು. ಯುವ ಸಮೂಹದಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಡಾ. ಅಂಬೇಡ್ಕರ್ ಅಸಮಾನತೆಗಳನ್ನು ತೊಲಗಿಸಿ, ಸಮಾನತೆ, ಸಹೊದರತ್ವ, ಸಾಮರಸ್ಯ, ಭಾವೈಕ್ಯತೆಗಳನ್ನು ಬೆಸೆಯಲು ಅವಕಾಶ ಮಾಡಿದ್ದಾರೆ. ಮುಂದಿನ ನೂರಾರು ವರ್ಷಗಳನ್ನು ಅವಲೋಕಿಸಿ, ಭವಿಷ್ಯದ ಭಾರತಕ್ಕೂ ತೊಂದರೆಯಾಗದಂತೆ ಸಂವಿಧಾನ ರೂಪಿಸಿ, ಆಡಳಿತಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ಸ್ವಾತಂತ್ರ್ಯ ಪ್ರತಿಪಾದಿಸಿದ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸುವ ಮೂಲಕ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದಾರೆ. ಅವರು ಸಮಾಜವನ್ನು ಸುಧಾರಣೆಗಿಂತ, ಪುನರ್ ನಿರ್ಮಾಣ ಮಾಡಿದರು. ಸದೃಢ ಸಮಾಜ ನಿರ್ಮಾಣಕ್ಕೆ ಸದಾಕಾಲ ಶ್ರಮಿಸಿದರು ಎಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಪ್ರತಿಯೊಬ್ಬ ಭಾರತೀಯ ಭಾರತದ ಸಂವಿಧಾನವನ್ನು ಓದಬೇಕು. ವಿಶ್ವದ ಅತ್ಯುತ್ತಮ, ಶ್ರೇಷ್ಠ ಸಂವಿಧಾನವಾಗಿ ಇದು ಗುರುತಿಸಿಕೊಂಡಿದೆ. ಸಂವಿಧಾನದ ಕಾನೂನು, ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದರು.ಅಥಣಿಯ ನ್ಯಾಯವಾದಿ ಡಾ. ಗೌತಮ ಬನಸೋಡೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೌದ್ಧ ಬಿಕ್ಕುಗಳಿಂದ ಬೌದ್ಧ ನಮನ ಮತ್ತು ಪ್ರಾರ್ಥನೆ ಜರುಗಿತು. ಇದಕ್ಕೂ ಮುಂಚೆ ಗಣ್ಯರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮಾಜಿ ಸಂಸದ ಐ.ಜಿ. ಸನದಿ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಹುಡಾ ಅಧ್ಯಕ್ಷ ಶಾಕೀರ ಸನದಿ, ಅಪರ ಜಿಲ್ಕಾಧಿಕಾರಿ ಗೀತಾ ಸಿ.ಡಿ, ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭ, ರಾಜು ಕೊಟ್ಯಾನವರ, ಕಲ್ಮೇಶ ಹಾದಿಮನಿ, ಎಂ. ಅರವಿಂದ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು. ಮುಖಂಡರಿದ್ದರು.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ:
ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ನಿಮಿತ್ತ ಧಾರವಾಡದ ಜುಬ್ಲಿ ವೃತ್ತದ ಬಳಿ ಇರುವ ಅವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಲಾರ್ಪಣೆ ಮಾಡಿದರು. ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ನಂತರ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು, ಜಾನಪದ ಕಲಾವಿದರು, ಯುವ ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.