ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಏ.14ರಂದು ಅದ್ಧೂರಿಯಾಗಿ ಆಚರಿಸಲಾಗುವುದು. ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಡಾ.ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ಜ್ಯೋತಿಯನ್ನು ಬೆಳಗ್ಗೆ 10ಗಂಟೆಗೆ ಬರಮಾಡಿಕೊಂಡು ಅಂಬೇಡ್ಕರ್ ಉದ್ಯಾನವನದಲ್ಲಿ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ನೆರವೇರಿಸಲಾಗುವುದು. ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಮೆರವಣಿಗೆ ನಡೆಯಲಿದೆ. ಬಳಿಕ ಸಂಜೆ 4ಕ್ಕೆ ಡಾ.ಅಂಬೇಡ್ಕರ್ ಉದ್ಯಾನವನದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗುವುದು. ಕಾರ್ಯಕ್ರಮಕ್ಕೆ ಅಗತ್ಯವಿರುವ ಪೆಂಡಾಲ್, ಕಟೌಟ್, ಆಸನ ವ್ಯವಸ್ಥೆ, ಉದ್ಯಾನವನ ಸ್ವಚ್ಛಗೊಳಿಸುವುದು. ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾನರ್, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಹಾನಗರ ಪಾಲಿಕೆಯಿಂದ ಕಲ್ಪಿಸಬೇಕು ಎಂದು ಸೂಚಿಸಿದರು.
ರೂಪಕ ವಾಹನಗಳ ಮೆರವಣಿಗೆ:ರೂಪಕ ವಾಹನಗಳ ಮೆರವಣಿಗೆ ಧರ್ಮವೀರ ಸಂಭಾಜಿ ವೃತ್ತದಿಂದ ಕಿರ್ಲೋಸ್ಕರ್ ರೋಡ್, ರಾಮದೇವ್ ಗಲ್ಲಿ, ಖಡೆಬಜಾರ್, ಶನಿವಾರ ಕೂಟ, ಕಾಕತಿವೇಸ್, ಚನ್ನಮ್ಮ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ಉದ್ಯಾನವನದ ವರೆಗೆ ತಲುಪಲಿದೆ. ಸಮಾಜದ ಮುಖಂಡರ ಸಲಹೆಯಂತೆ ಅಂಬೇಡ್ಕರ್ ಅವರ ಕುರಿತು ಅಧ್ಯಯನ ಕೈಗೊಂಡಿರುವ ಸಂಪನ್ಮೂಲ ವ್ಯಕ್ತಿಗಳನ್ನು ಉಪನ್ಯಾಸಕ್ಕೆ ಆಹ್ವಾನಿಸಬೇಕು ಎಂದರು.
ಆಮಂತ್ರಣ ಪತ್ರಿಕೆಗಳನ್ನು ಶಿಷ್ಟಾಚಾರದ ಪ್ರಕಾರ ಮುದ್ರಿಸಿ, ಮುಂಚಿತವಾಗಿಯೇ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು.ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸ್ಥಳೀಯ ಕಲಾ ತಂಡಗಳನ್ನು ಆಹ್ವಾನಿಸಲಾಗುವುದು ಎಂದರು.
ಮಲ್ಲೇಶ ಚೌಗಲಾ ಮಾತನಾಡಿ, ನಿಗದಿತ ಸಮಯದೊಳಗೆ ಮೆರವಣಿಗೆ, ವೇದಿಕೆ ಕಾರ್ಯಕ್ರಮ ನಡೆಯಬೇಕು. ಏಪ್ರಿಲ್ ಮೊದಲ ವಾರದಿಂದ ಶಾಲಾ ಮಕ್ಕಳಿಗೆ ರಜೆ ಇರುವ ಕಾರಣ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಮುಂಚಿತವಾಗಿಯೇ ವಿಚಾರ ಸಂಕೀರ್ಣ ನಡೆಸಬೇಕು ಎಂದರು. ಜಯಂತಿ ಆಚರಣೆ ವೇಳೆ ಮುಂಜಾಗೃತಾ ಕ್ರಮವಾಗಿ ಆ್ಯಂಬುಲೆನ್ಸ್, ಕುಡಿಯುವ ನೀರು, ಮೊಬೈಲ್ ಟಾಯ್ಲೆಟ್ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚು ಜನರು ಆಗಮಿಸುವ ಸಾದ್ಯತೆ ಇರುವ ಕಾರಣ ವೈದ್ಯಕೀಯ ಸಿಬ್ಬಂದಿ ನೇಮಿಸಬೇಕು ಎಂದರು.ದುರ್ಗೇಶ್ ಮೇತ್ರಿ ಮಾತನಾಡಿ, ಮೆರವಣಿಗೆಗೆ ಪ್ರತಿ ಹಳ್ಳಿಯಿಂದ ರೂಪಕ ವಾಹನಗಳು ಬರುವ ಸಂದರ್ಭದಲ್ಲಿ ಗ್ರಾಮಿಣ ಭಾಗದ ಪೊಲೀಸರು ಜನರನ್ನು ವಾಪಸ್ ಹಳುಹಿಸುತ್ತಿರುವ ಪ್ರಕರಣಗಳು ಕಳೆದ ವರ್ಷ ಕಂಡು ಬಂದಿವೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮೀಣ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಬೇಕು ಎಂದು ವಿನಂತಿಸಿದರು.
ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ನಾಮ ನಿರ್ದೇಶಿತ ಸದಸ್ಯ ಕರೆಪ್ಪ ಗುಡೇನ್ನವರ ಮಾತನಾಡಿ, ಜಿಲ್ಲೆಯ ವಸತಿ ಶಾಲೆಗಳಿಗೆ ಅಂಬೇಡ್ಕರ್ ಹೆಸರು ಮರು ನಾಮಕರಣ ಮಾಡಬೇಕು ಎಂಬ ಆದೇಶ ಸರ್ಕಾರ ಈಗಾಗಲೇ ಹೊರಡಿಸಿದೆ. ಇದೊಂದು ಮಹತ್ತರ ಬೆಳವಣಿಗೆ ಹಾಗಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಡಾ.ಅಂಬೇಡ್ಕರ್ ಅವರು ಪುಸ್ತಕ ಪ್ರೇಮಿಗಳು ಅವರ ವಿಚಾರ ಚಿಂತನೆಯಂತೆ ಅಂಬೇಡ್ಕರ್ ಅವರ ಲೇಖನಗಳು, ಜೀವನ ಚರಿತ್ರೆ ಬಗ್ಗೆ ಪುಸ್ತಕ ಮಳಿಗೆಗಳನ್ನು ಸ್ಥಾಪಿಸುವಂತೆ ಯುವ ಮುಖಂಡ ವಿವೇಕ ಕರ್ಪೆ ವಿನಂತಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಪ್ರತಿ ವರ್ಷದಂತೆ ಅಂಬೇಡ್ಕರ್ ಜಯಂತಿ ಆಚರಣೆಗೆ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದರು. ಪ್ರತಿ ಗ್ರಾಪಂ ಹಾಗೂ ಶಾಲಾ ಕಾಲೇಜುಗಳಲ್ಲಿ ಡಾ.ಅಂಬೇಡ್ಕರ್ ಜಯಂತಿ ಕಡ್ಡಾಯವಾಗಿ ಆಚರಣೆಗೆ ಆದೇಶವಿದೆ. ಯಾವುದೇ ಲೋಪದೋಷಗಳು ಆಗದಂತೆ ಅಚ್ಚುಕಟ್ಟಾಗಿ ಜಯಂತಿ ಆಚರಣೆಗೆ ಮಾಡಲು ಜಿಪಂ ವತಿಯಿಂದ ಸೂಚನೆ ನೀಡಲಾಗುವುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ, ಎಸಿಪಿ ಸದಾಶಿವ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಮುಖಂಡರಾದ ಭಾವಕಣ್ಣ ಭಂಗ್ಯಾಗೋಳ (ನಾಯಕ), ಮಹೇಶ್ ಶಿಗಿಹಳ್ಳಿ, ಲಕ್ಷಣ ಕೋಲಕಾರ, ಪ್ರವೀಣ್ ಚಲವಾದಿ ಮತ್ತಿತರ ಮುಖಂಡರು ಹಾಗೂ ಸಮಾಜದ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.