ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜೀವನ ಮತ್ತು ಆದರ್ಶ ಜಾಗತಿಕ ವರ್ತಮಾನದ ಅವಶ್ಯಕತೆಗಳ ಜತೆ ಅನುಸಂಧಾನ ಮಾಡಿಕೊಳ್ಳಬೇಕು

ಗಂಗಾವತಿ: ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು.

ಈ ವೇಳೆ ಪ್ರಾಂಶುಪಾಲ ಪ್ರೊ. ಕರಿಗೂಳಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜೀವನ ಮತ್ತು ಆದರ್ಶ ಜಾಗತಿಕ ವರ್ತಮಾನದ ಅವಶ್ಯಕತೆಗಳ ಜತೆ ಅನುಸಂಧಾನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಬಾಬಾಸಾಹೇಬ್‌ ಹೇಳಿದಂತೆ ಜೀವನ ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು, ಏಕೆಂದರೆ ಆಯುಷ್ಯ ದೀರ್ಘವಾಗಿದ್ದರೂ ಸಮಾಜಕ್ಕೆ ಉಪಯೋಗವಿಲ್ಲದಿದ್ದರೆ ಬದುಕು ಅನರ್ಥ. ನೋಂದು ಬೆಂದವರನ್ನು ಶೋಷಣೆಯಿಂದ ಮುಕ್ತಗೊಳಿಸಿ ಬೆಳವಣಿಗೆಯೆಡೆಗೆ ಸಾಗಲು ಮಾರ್ಗದರ್ಶಕರಾಗಿ ಇಂದಿಗೂ ಬಾಬಾಸಾಹೇಬರು ಎಲ್ಲರನ್ನೂ ಮುನ್ನಡೆಸುತ್ತಿದ್ದಾರೆ. ವೈಯಕ್ತಿಕ ಜೀವನ ಅನುಭವಿಸದೇ ಇಡೀ ಜೀವಮಾನದ ಸಮಯ ಸಮಾಜದ ಏಳ್ಗೆಗಾಗಿ ನೀಡಿದರು ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ವೀರೇಶ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ರವಿಕುಮಾರ, ಅತಿಥಿ ಉಪನ್ಯಾಸಕ ಅರ್ಜುನ್, ವೆಂಕಟರಾಜು, ದೇವರಾಜ, ರಾಧಾ, ಫಿರಾವಲಿ, ಪರಶುರಾಮ್ ಹಾಗೂ ಜಬೀನಾಬೇಗಂ, ಚಿನ್ನವರಪ್ರಸಾದ, ಶರಣ ಉಪಸ್ಥಿತರಿದ್ದರು.