ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರಿಗೆ ಮರಣೋತ್ತರ ಪದ್ಮಶ್ರೀ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಧಾರವಾಡ:
ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರಿಗೆ ಮರಣೋತ್ತರ ಪದ್ಮಶ್ರೀ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಡಾ. ಆನಂದ ಪಾಂಡುರಂಗಿ ಅಭಿಮಾನಿ ಬಳಗದಿಂದ ನಡೆದ ಮನೋಚೇತನ ಭಾವನಮನ ಶ್ರದ್ಧಾಂಜಲಿಯಲ್ಲಿ ಒಕ್ಕೊರಲಿನ ಆಗ್ರಹಿಸಲಾಯಿತು.ಈ ವೇಳೆ ಮಾತನಾಡಿದ ಆರ್‌ಎಸ್‌ಎಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಪರೋಪಕಾರಕ್ಕಾಗಿ ಮತ್ತು ಸಮಾಜದ ಸೇವೆಗಾಗಿಯೇ ಕೆಲವರು ಬದುಕಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳುತ್ತಾರೆ. ಅವರ ಸಾಲಿಗೆ ಡಾ. ಆನಂದ ಪಾಂಡುರಂಗಿ ಕೂಡ ಸೇರಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನುಡಿ ನಮನ ಸಲ್ಲಿಸಿ, ಮನೋರೋಗಿಗಳನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದ 1980ರ ದಶಕದಲ್ಲಿ ವೈದ್ಯಕೀಯ ಸೇವೆ ಆರಂಭಿಸಿದ ಡಾ. ಪಾಂಡುರಂಗಿ ಅವರು ಜನರಿಗೆ ಮಾನಸಿಕ ಆರೋಗ್ಯ ಸೇವೆ ನೀಡಿ ಸೈ ಎನಿಸಿಕೊಂಡರು. ಅವರ ಕೊಡುಗೆಯನ್ನು ಇಂದು ಇಡೀ ರಾಜ್ಯವೇ ಸ್ಮರಿಸುತ್ತಿದೆ ಎಂದು ಹೇಳಿದರು.ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವ್ಯಸನಗಳೇ ಸಮಾಜವನ್ನು ಪಲ್ಲಟ ಮಾಡುವ ಸಂದರ್ಭದಲ್ಲಿ ವ್ಯಸನಮುಕ್ತ ಯುವಕರು ಮತ್ತು ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಗಲಿರುಳು ಶ್ರಮಿಸಿದ ಡಾ. ಆನಂದ ಪಾಂಡುರಂಗಿ ಅವರ ಕೊಡುಗೆ ಉತ್ತರ ಕರ್ನಾಟಕದ ನೊಂದ ಬಡವರಿಗೆ ಆಸರೆಯಾಗಿತ್ತು. ಅವರ ಮಾದರಿಯಲ್ಲೇ ಅವರ ಪತ್ನಿ ಮತ್ತು ಮಕ್ಕಳು ಮನೋವೈದ್ಯಕೀಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡಲಿ ಎಂದರು.
ವಿವೇಕಾನಂದ ಆಶ್ರಮದ ಶ್ರೀವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸೇವೆಯನ್ನು ಎಷ್ಟು ಉತ್ಕೃಷ್ಠವಾಗಿ ಮಾಡಬೇಕು ಎಂಬುದಕ್ಕೆ ಡಾ. ಪಾಂಡುರಂಗಿ ಅವರು ಉತ್ತಮ ಉದಾಹರಣೆ. ಅವರನ್ನು ಸ್ಮರಿಸಲು ಧಾರವಾಡದ ಪ್ರಮುಖ ವೃತ್ತ ಅಥವಾ ರಸ್ತೆಗೆ ಅವರ ಹೆಸರಿಡಲು ಮನವಿ ಮಾಡಿದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸಮಾಜದ ಮನೋ ಆರೋಗ್ಯಕ್ಕೆ ಶ್ರಮಿಸಿದ ಡಾ. ಪಾಂಡುರಂಗಿ ಅವರ ಹೆಸರು ಸ್ಥಿರವಾಗಿ ಇರುವಂತೆ ಧಾರವಾಡದ ರಸ್ತೆ ಮತ್ತು ವೃತ್ತಕ್ಕೆ ಅವರ ಹೆಸರು ಇಡುವುದಲ್ಲದೇ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮನೋ ರೋಗಿಗಳ ಸೇವೆ ಮಾಡಿದ ಅವರು ಮನೋರೋಗದ ಬಗ್ಗೆ ಇದ್ದ ಅಸ್ಪ್ರಶ್ಯತೆ ಹೋಗಲಾಡಿಸಿದ ವೈದ್ಯರು. ಅವರ ಮನೆ ಬಳಿಯ ಮೈದಾನ ಅಭಿವೃದ್ಧಿಗೊಳಿಸಿ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.ಉತ್ತರಾಧಿಮಠದ ಶ್ರೀಪ್ರಸನ್ನಾಚಾರ ಕಟ್ಟಿ ಅವರು ಮಾತನಾಡಿ, ಸಮಾಜವೇ ಸ್ಫೂರ್ತಿಗೊಳ್ಳುವಂತೆ ಕೆಲಸ ಮಾಡಿದ್ದು ಡಾ. ಪಾಂಡುರಂಗಿ ಅವರ ಕೊಡುಗೆಯನ್ನು ಸ್ಮರಿಸುವ ಕೆಲಸವಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಗದಗಿನ ತೊಂಟದಾರ್ಯ ಮಹಾ ಸಂಸ್ಥಾನ ಮಠದ ಡಾ. ಸಿದ್ದರಾಮ ಮಹಾಸ್ವಾಮಿ ಮಾತನಾಡಿ, ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ಸ್ಮರಣಾರ್ಥ ಕೊಡ ಮಾಡುವ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಅ. 22ರಂದು ಮರಣೊತ್ತರವಾಗಿ ಡಾ. ಆನಂದ ಪಾಂಡುರಂಗಿ ಆವರಿಗೆ ನೀಡಲಾಗುವುದು ಎಂದು ಹೇಳಿದರು.ಡಾ. ಆದಿತ್ಯ ಪಾಂಡುರಂಗಿ ಮಾತನಾಡಿ, ಪ್ರತಿ ವರ್ಷ ಮನೋವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಒಬ್ಬ ವೈದ್ಯರಿಗೆ ಡಾ. ಆನಂದ ಪಾಂಡುರಂಗಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದರು. ಪ್ರಸನ್ನ ಕರ್ಪೂರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಹಿರಿಯ ಪತ್ರಕರ್ತರಾದ ಬಸವರಾಜ ಹೊಂಗಲ ಹಾಗೂ ನರಸಿಂಹ ಮೂರ್ತಿ ನುಡಿ-ನಮನ ಸಲ್ಲಿಸಿದರು.
ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಶಾಸಕ ಮಹೇಶ ಟೆಂಗಿನಕಾಯಿ, ಮಕ್ಕಳ ತಜ್ಞ ಡಾ. ಜಗದೀಶ ನಿರಡಿ, ಡಾ. ಎಸ್.ಆರ್. ರಾಮನಗೌಡರ, ಡಾ. ರಾಜನ್ ದೇಶಪಾಂಡೆ ಸೇರಿದಂತೆ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು. ಡಾ. ಶಶಿಧರ ತೋಡಕರ್ ಪ್ರಾಸ್ತಾವಿಕ ಮಾತನಾಡಿದರು. ಮಾಯಾ ರಾಮನ ನಿರೂಪಿಸಿದರು.