ಜೀವಿಯ ಚೈತನ್ಯವೇ ಪ್ರಕೃತಿ: ಡಾ. ಆರೂಡ ಭಾರತಿ ಸ್ವಾಮೀಜಿ

| Published : May 22 2024, 12:53 AM IST

ಜೀವಿಯ ಚೈತನ್ಯವೇ ಪ್ರಕೃತಿ: ಡಾ. ಆರೂಡ ಭಾರತಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚೈತನ್ಯದ ಇಚ್ಛಾಶಕ್ತಿಯ ಪ್ರಚೋದನೆಯಿಂದ ಪಂಚಭೂತಗಳ ಸಹಕಾರದಿಂದ ಪ್ರಕೃತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಸುತ್ತೂರು

ಜೀವಿಯ ಚೈತನ್ಯವೇ ಪ್ರಕೃತಿ ಎಂದು ಬೆಂಗಳೂರಿನ ರಾಮೋಹಳ್ಳಿ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಡಾ. ಆರೂಡ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ಸುತ್ತೂರು ಕ್ಷೇತ್ರದಲ್ಲಿ ಮಂಗಳವಾರ ನಡೆದ ಅಧ್ಯಯನ ಶಿಬಿರದಲ್ಲಿ ಗುಣಬೇಧ ವಿಕಾರಂ ಹಾಗೂ ವಿಶ್ವ ರಚನಾಭೇದಂ ವಿಷಯಗಳ ಕುರಿತು ಅವರು ಉಪನ್ಯಾಸ ನೀಡಿದರು.

ಚೈತನ್ಯದ ಇಚ್ಛಾಶಕ್ತಿಯ ಪ್ರಚೋದನೆಯಿಂದ ಪಂಚಭೂತಗಳ ಸಹಕಾರದಿಂದ ಪ್ರಕೃತಿ ನಿರ್ಮಾಣವಾಗಿದೆ. ಗುಣಗಳನ್ನು ಗರ್ಭೀಕರಿಸಿಕೊಂಡು ಪ್ರಕೃತಿಯು ಮಹತ್ ಆಯಿತು. ಸತ್ವಗುಣ, ರಜೋಗುಣದ ಮಿಶ್ರಣದಿಂದ ಮನುಷ್ಯನ ಮನಸ್ಸು ನಿರ್ಮಾಣವಾಯಿತು. ರಜೋಗುಣದಿಂದ ಇಂದ್ರಿಯಗಳ ಮೂಲಕ ಮನಸ್ಸು ವಸ್ತುಗಳ ಕಡೆ ಸಂಚರಿಸುತ್ತದೆ. ಸತ್ವ ಗುಣದ ಸಹಾಯದಿಂದ ಅವುಗಳ ಬಗ್ಗೆ ತಿಳುವಳಿಕೆಯನ್ನು ಹೊಂದುತ್ತದೆ. ಶರೀರವು ಪಂಚಭೂತಗಳ ಮಿಶ್ರಣದಿಂದ ಉಂಟಾಗಿದೆ ಎಂದರು.

ಸಾಂಖ್ಯದರ್ಶನವು ಪ್ರಾಚೀನವಾದದ್ದು. ಸತ್ವ, ರಜ, ತಮ, ವಿಶ್ವವನ್ನು ವ್ಯಾಪಿಸಿರುವ ತ್ರಿಗುಣಗಳು ಪ್ರಕೃತಿ ತತ್ವದಿಂದ ಉದಯಿಸಿವೆ. ಈ ಗುಣಗಳು ಸಮಸ್ಥಿಯಲ್ಲಿದ್ದರೆ ಸೃಷ್ಠಿ ಇಲ್ಲ, ಸಮಸ್ಥಿತಿಗೆ ಬಂದರೆ ಪ್ರಳಯ. ಪುರುಷ ತತ್ವ ಕೇವಲ ಕ್ರೀಯಾಶೀಲವಲ್ಲ, ಪ್ರಕೃತಿ ತತ್ವವು ಪುರುಷ ಚೈತನ್ಯವನ್ನು ಬಳಸಿಕೊಂಡು ವೈವಿದ್ಯಮಯ ಸೃಷ್ಟಿಗೆ ಕಾರಣವಾಗಿದೆ. ನಿತ್ಯ, ನಿರ್ಗುಣ, ನಿರಾಕಾರ, ಅವ್ಯಕ್ತ, ಅವ್ಯಯ, ಅನಾಗ, ಅವಿಕಾರ, ಮುಕ್ತ ಇವು ನಾನು ಎಂಬುದರ ಸಾಕ್ಷಿ ರೂಪ. ಅರಿಯುವ ಶಕ್ತಿ ಚೇತನ. ಪುರುಷ ಅಲ್ಲದ್ದು ಜಡ, ಪ್ರಕೃತಿ ಜಡವಾದರೂ ಪುರುಷನೊಡನೆ ಸೇರಿ ಕ್ರಿಯಾಶೀಲವಾಗುವುದು.

ಒಂದೊಂದು ಭೂತಗಳ ಪ್ರಧಾನ ಅಂಶ ಒಂದೊಂದು ಜ್ಞಾನೇಂದ್ರೀಯವಾಗಿವೆ ಎಂದು ಅವರು ತಿಳಿಸಿದರು.

ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ವಿ. ವಸಂತ್ ಕುಮಾರ್ ಅವರು ಗುಣಭೇದ ವಿಕಾರಂ ವಿಷಯ ಕುರಿತು ಉಪನ್ಯಾಸ ನೀಡಿದರು.

ಶಿಬಿರದಲ್ಲಿ ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿರುವ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.