ಸಾರಾಂಶ
ಮೈಸೂರು : ಕಾಂಗ್ರೆಸ್ ಆಂತರಿಕ ಚುನಾವಣೆಯಿಂದ ದೇಶದ ಹೊಸ ನಾಯಕತ್ವಕ್ಕೆ ಬುನಾದಿ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಸಂಬಂಧ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಚುನಾವಣಾ ಪ್ರಕ್ರಿಯೆಯು ಸಂಪೂರ್ಣವಾಗಿ ಪಕ್ಷದ ಸಂವಿಧಾನಬದ್ಧವಾದ ಪ್ರಜಾಪ್ರಭುತ್ವ ನೀತಿಯನ್ನು ಅಳವಡಿಸಿಕೊಂಡಿದೆ ಎಂದರು.
ದೇಶದಲ್ಲಿ ಬೇರೆ ಯಾವ ರಾಜಕೀಯ ಪಕ್ಷಗಳು ಕೂಡ ಆಂತರಿಕ ಚುನಾವಣೆಯನ್ನು ಸಂವಿಧಾನ ಬದ್ಧವಾಗಿ ನಡೆಸುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಆಂತರಿಕ ಚುನಾವಣಾ ನೀತಿಯಲ್ಲಿ ಸಂವಿಧಾನದ ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಮೀಸಲಾತಿಯ ಆಧಾರದ ಮೇಲೆ ಎಲ್ಲರಿಗೂ ಅವಕಾಶ ಕಲ್ಪಿಸುವ ಹಿತದೃಷ್ಟಿಯಿಂದ ಈ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು.
ಆ.2 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆ.16 ರಿಂದ ಸೆ.16 ರವರೆಗೆ ಸದಸ್ಯತ್ವ ನೋಂದಣಿ ನಡೆಯಲಿದೆ. ಸದಸ್ಯತ್ವ ನೊಂದಣಿಗೆ 50 ರೂ. ಶುಲ್ಕ, ಬ್ಲಾಕ್ ಸಮಿತಿಗೆ 17, ವಿಧಾನಸಭಾ ಸಮಿತಿಗೆ 27, ಜಿಲ್ಲಾ ಸಮಿತಿಗೆ 27, ರಾಜ್ಯ ಸಮಿತಿಗೆ 57 ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದರು.
ಮೈಸೂರು ವಿಭಾಗೀಯ ಯುವ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಕಾಳಿಮುತ್ತು, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಯುವ ಕಾಂಗ್ರೆಸ್ ನಗರಾಧ್ಯಕ್ಷ ಅಬ್ರಾರ್, ಜಿಲ್ಲಾಧ್ಯಕ್ಷ ಮಂಜು, ಮುಖಂಡರಾದ ಹ್ಯಾರಿಸ್, ಹಂಸದ್ ಖಾನ್, ಮೊಸಿನ್ ಖಾನ್, ಸಂತೋಷ್, ಪ್ರವೀಣ್, ರಫೀಕ್ ಆಲಿಖಾನ್, ಚಂದ್ರು ಮೊದಲಾದವರು ಇದ್ದರು.