ಎಲ್ಲಾ ವರ್ಗಕ್ಕೂ ಸಮಾನತೆ ತಂದುಕೊಟ್ಟಿದ್ದು ಅಂಬೇಡ್ಕರ್‌

| Published : May 19 2025, 02:03 AM IST

ಸಾರಾಂಶ

ದೇಶದ ಜನರಿಗೆ ಸಮಾನತೆ ಬರಬೇಕೆಂಬ ಅಶಯ ಈಡೇರಬೇಕಾದರೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅವರ ಆಶಯದಂತೆ ಸರ್ವರಿಗೂ ಸಮಾನತೆ ದೊರೆಯಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅಂಬೇಡ್ಕರ್ ದಲಿತ ವರ್ಗಕ್ಕೆ ಸೀಮಿತರಾದ ನಾಯಕರಲ್ಲ. ಎಲ್ಲಾ ಸಮಾಜವರಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ತಂದು ಕೊಟ್ಟ ಮಹಾಪುರುಷ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಮೈಸೂರು ತಾಲೂಕು ಇಲವಾಲ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ 134ನೇ ಅಂಬೇಡ್ಕರ್‌ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಎಲ್ಲಾ ವರ್ಗದ ನಾಯಕ ಎಂಬುದನ್ನು ಅರಿಯಬೇಕು. ದೇಶದ ಜನರಿಗೆ ಸಮಾನತೆ ಬರಬೇಕೆಂಬ ಅಶಯ ಈಡೇರಬೇಕಾದರೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅವರ ಆಶಯದಂತೆ ಸರ್ವರಿಗೂ ಸಮಾನತೆ ದೊರೆಯಬೇಕು. ಭಾಷಣಕ್ಕೆ ಸೀಮಿತವಾಗದೆ ಅವರ ಚಿಂತನೆಗಳನ್ನು ಅನುಸರಿಸಿ ನಡೆಯಬೇಕು ಎಂದರು.

ಪದವೀಧರರು, ವ್ಯಾಪಾರಸ್ಥರಿಗೆ ಇದ್ದ ಮತದಾನದ ಹಕ್ಕನ್ನು ಎಲ್ಲರಿಗೂ ನೀಡಿದರು. ಇದರಿಂದಾಗಿ ಗ್ರಾಪಂನಿಂದ ಪ್ರಧಾನಿ ಸ್ಥಾನದವರೆಗೂ ಒಂದೇ ಒಂದು ಮತ ಎನ್ನುವುದನ್ನು ತಂದರು. ಇಂದು ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಸಿಕ್ಕಿದ್ದರಿಂದ ರೈತನ ಮಗನಾದ ನಾನು ಶಾಸಕನಾದೆ, ಸಿದ್ದರಾಮನಹುಂಡಿ ಗ್ರಾಮದ ಸಿದ್ದರಾಮಯ್ಯ ಮುಖ್ಯಮಂತ್ರಿ, ನರೇಂದ್ರ ಮೋದಿ ಪ್ರಧಾನಿಯಾಗಲು ಕಾರಣವಾಯಿತು ಎಂದು ನುಡಿದರು.

ಅಂಬೇಡ್ಕರ್ ಅವರನ್ನು ವಿರೋಧಿಸುತ್ತಿದ್ದವರೇ ಬದಲಾದ ಕಾಲದಲ್ಲಿ ಅಂಬೇಡ್ಕರ್ ಅವರನ್ನು ಹೊಗಳುತ್ತಿದ್ದಾರೆ. ಸಾಮಾಜಿಕ ನ್ಯಾಯದ ಮಂತ್ರ ಪಠಿಸುತ್ತಿದ್ದಾರೆ. ಸಂವಿಧಾನದ ಮಹತ್ವ ಇಂದು ಎಲ್ಲರಿಗೂ ಅರಿವಾಗುತ್ತಿರುವುದರಿಂದ ಸಮಾಜದಲ್ಲಿ ಹೊಸತನ ಕಾಣುತ್ತಿದೆ ಎಂದರು.

ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರ ಅಂಬೇಡ್ಕರ್ ಅವರ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಅಂಬೇಡ್ಕರ್ ಪರಿಶ್ರಮದಿಂದಾಗಿ ಸಂವಿಧಾನ ಸಿಕ್ಕಿದೆ. ಇಂದು ಜಗತ್ತಿನಲ್ಲಿ ಕೊಂಡಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಸಂವಿಧಾನದಡಿ ಮೀಸಲಾತಿ ದೊರೆಯದಿದ್ದರೆ ನನ್ನಂತ ವ್ಯಕ್ತಿ ಶಾಸಕನಾಗಿ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಜನರ ಅಭಿವೃದ್ದಿಗಾಗಿ ಮೀಸಲಾತಿ ತಂದುಕೊಟ್ಟರು. ಇಂದು ಅಂತಹ ಮಹಾನ್ ವ್ಯಕ್ತಿಗೆ ಅಪಮಾನಿಸುವ ಕೆಲಸಗಳಾಗುತ್ತಿರುವುದು ಮನಸ್ಸಿಗೆನೋವಿನ ಸಂಗತಿ ಎಂದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ದಲಿತರು, ಹಿಂದುಳಿದವರು ಒಂದಾಗಬೇಕು. ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರೂ ನಡೆಯಬೇಕು. ಸಂವಿಧಾನ ವಿರೋಧಿ ಶಕ್ತಿಗಳಿಂದ ಉಂಟಾಗುವ ಅಪಾಯವನ್ನು ತಪ್ಪಿಸಬೇಕು ಎಂದು ಹೇಳಿದರು.

ಗಾಂಧಿನಗರದ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಎಸ್. ಅರುಣ್ ಕುಮಾರ್, ಮುಡಾ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಜಿಪಂ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಜವರಯ್ಯ, ನಾಗವಾಲ ಗ್ರಾಪಂ ಮಾಜಿ ಅಧ್ಯಕ್ಷ ಅರ್. ನರೇಂದ್ರ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಪತ್ನಿ ವಾಣಿ, ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಅಧ್ಯಕ್ಷ ವಿಜಯನಾಯಕ್, ದಿನೇಶ್, ದೇವರಾಜ್ ಒಡೆಯರ್, ಬೆಳವಾಡಿ ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್, ಮುಖಂಡರಾದ ಕರೀಗೌಡ, ಎಂ.ಎಸ್.ಎಂ. ಕುಮಾರ್, ಶಿವಲಿಂಗೇಗೌಡ, ವೈ.ಸಿ. ಸ್ವಾಮಿ, ಹುಯಿಲಾಳು ರಾಮಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಮೈದನಹಳ್ಳಿ ಶಿವಣ್ಣ, ಭಾಗ್ಯ, ಲೋಕೇಶ್, ಹಿನಕಲ್ ಕುಮಾರ್, ಮಹಿಳಾ ಹೋರಟಾಗಾರ್ತಿ ಶಿವಮ್ಮ ಮೊದಲಾದವರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.