ಅಂಬೇಡ್ಕರ್‌ರು ನಮಗೆ ಹಾಕಿಕೊಟ್ಟ ಸಂವಿಧಾನದ ಮಾರ್ಗ, ನಿಮ್ಮ ಭವಿಷ್ಯಕ್ಕಾಗಿ. ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ಅದನ್ನು ನಾವು ಪಾಲನೆ ಮಾಡಬೇಕು.
ಕನ್ನಡಪ್ರಭ ವಾರ್ತೆ ವಿಜಯಪುರ
ಡಾ.ಅಂಬೇಡ್ಕರ್ ವಿಚಾರಧಾರೆಗಳಿಗೆ ಕೊನೆಯಿಲ್ಲ. ಅವರು ಹಾಕಿಕೊಟ್ಟ ಸನ್ಮಾನರ್ಗದಲ್ಲಿ ನಾವು ನಡೆಯಬೇಕು. ಪ್ರಪಂಚದ ಸಂವಿಧಾನಗಳನ್ನು ನೋಡಿದಾಗ ನಮ್ಮ ಸಂವಿಧಾನದಷ್ಟು ಗಟ್ಟಿ ಬೆರೋಂದಿಲ್ಲ. ಆ ಮಹಾನ್ ವ್ಯಕ್ತಿ ಹಾಕಿ ಕೊಟ್ಟ ಬುನಾದಿ ಇದರ ಮೇಲೇ ಗೊತ್ತಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಡಾ.ಅಂಬೇಡ್ಕರ್ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಡೆದ ಬೃಹತ್ ಕ್ಯಾಂಡಲ್ ಮಾರ್ಚ್ ಹಾಗೂ ಸಾಂಸ್ಕೃತಿಕ ನಮನ ಕಾರ್ಯಕ್ರಮವನ್ನು ನಗರದ ಶಿವಾಜಿ ವೃತ್ತದಲ್ಲಿ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಯಾಂಡಲ್ ಮಾರ್ಚ್ ಅಥವಾ ರೂಟ್ ಮಾರ್ಚ್ ಮಾಡುವ ಉದ್ದೇಶ ಹಾಗೂ ಅಂಬೇಡ್ಕರ್ ಅವರು ನಡೆದು ಬಂದ ಜೀವನ, ಜೀವನದ ದಾರಿ, ಅವರು ಪಟ್ಟಂತಹ ಕಷ್ಟಗಳ ಬಗ್ಗೆ ವಿವಿರಿಸಿದ ಅವರು, ಅಂಬೇಡ್ಕರ್‌ರು ನಮಗೆ ಹಾಕಿಕೊಟ್ಟ ಸಂವಿಧಾನದ ಮಾರ್ಗ, ನಿಮ್ಮ ಭವಿಷ್ಯಕ್ಕಾಗಿ. ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ಅದನ್ನು ನಾವು ಪಾಲನೆ ಮಾಡಬೇಕು. ಇವತ್ತು ಅವರು ಕೊಟ್ಟ ಕೊಡುಗೆ ನೆನೆಸುವ ದಿನ, ಅವರ ಸಾಧನೆ ನಾವು ಮಾತನಾಡುತ್ತಾ ಹೋದರೆ ಯೂನಿವರ್ಸಿಟಿಯ ಸಾಧನೆಗಳ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬೃಹತ್ ಕ್ಯಾಂಡಲ್ ಮಾರ್ಚ್ ಜಾಥಾ ನಡೆಸಿರುವುದು ಸಂತೋಷ ತಂದಿದೆ. ಇದು ಮಹಾಶಕ್ತಿಯ ಸಂಕೇತವಾಗಿದೆ. ಅಂಬೇಡ್ಕರ್‌ರು 1951ರಲ್ಲಿ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬರುತ್ತಾರೆ. ಬಳಿಕ ಅವರು ಪ್ರತಿಕಾಗೋಷ್ಠಿಯಲ್ಲಿ ಹೇಳುತ್ತಾರೆ, ಹಿಂದೂ ಕೋಡ್ ಬಿಲ್, ಏಕ ಪತ್ನಿತ್ವ ಹಕ್ಕು, ತಂದೆಯ ಆಸ್ತಿಯಲ್ಲಿ ಸಮನಾದ ಹಕ್ಕು, ಎಲ್ಲ ವೇತನದಲ್ಲಿ ಸಮಾನ ಹಕ್ಕು ಕೊಡಬೇಕು ಎಂದು ಹೇಳಿದ್ದು ಅದು ಪಾಸ್ ಆಗಲ್ಲ. ಆ ಕಾರಣಕ್ಕೆ ಅವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಂದು ಹೊರ ಬರುತ್ತಾರೆ ಎಂದು ನೆನಪಿಸಿದರು.
ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಕ್ಯಾಂಡಲ್ ಹಿಡಿದುಕೊಂಡು ಶಿವಾಜಿ ವೃತ್ತದಿಂದ ಗಾಂಧಿವೃತ್ತ, ಬಸವೇಶ್ವರ ವೃತ್ತದ ಮೂಲಕ ಮೆರವಣಿಗೆ ಸಾಗಿದರು. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕ್ಯಾಂಡಲ್ ಬೆಳಗಿಸಲಾಯಿತು.ಜಿಲ್ಲಾಧಿಕಾರಿ ಡಾ.ಆನಂದ.ಕೆ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ, ಸಮಾಜ ಕಲ್ಯಾಣ ಇಲಾಖೆ ತಾಲೂಕಾ ಅಧಿಕಾರಿ ಬಿ.ಜೆ.ಇಂಡಿ, ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯಕುಮಾರ ಅಜಮನಿ, ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.