ಸಾರಾಂಶ
ಜಗಜೀವನರಾಮ್ ಅವರು ನಿರಂತರವಾದ ಹೋರಾಟದ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಶೋಷಿತರ, ರೈತರ, ಕಾರ್ಮಿಕರ ಆಶಾಕಿರಣವಾಗಿ ರಾಷ್ಟ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಡಾ. ಬಾಬು ಜಗಜೀವನರಾಮ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವಾತಂತ್ರ್ಯನಂತರ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ, ಉಪ ಪ್ರಧಾನಿಯಾಗಿ, ವಿವಿಧ ಖಾತೆಯ ಸಚಿವರಾಗಿ, ರೈತರ, ಶೋಷಿತರ, ಬಡವರಿಗಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಮೂಲಕ ದೇಶ ಕಂಡ ಅಪ್ರತಿಮ ಜನನಾಯಕರಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.ನಗರದ ಆದರ್ಶ ನಗರದಲ್ಲಿರುವ ‘ದಿ ರಾಷ್ಟ್ರೀಯ ಕಂಪ್ಯೂಟರ ಸಾಕ್ಷರತಾ ಸಮಿತಿ’ಯ ಎನ್.ಟಿ.ಟಿ.ಸಿ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಡಾ.ಬಾಬು ಜಗಜೀವನರಾಂ ಅವರ 38ನೇ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದರು.
ಸಂಸ್ಥೆಯ ಸಂಯೋಜಕರಾದ ಸುರೇಖಾ ಹಿರೇನೂರ ಮಾತನಾಡಿ, ಜಗಜೀವನರಾಮ್ ಅವರು ನಿರಂತರವಾದ ಹೋರಾಟದ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಶೋಷಿತರ, ರೈತರ, ಕಾರ್ಮಿಕರ ಆಶಾಕಿರಣವಾಗಿ ರಾಷ್ಟ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರವೀಣ ಬರ್ಡುಲ್, ಬಾಲಮಣಿ ಬಡಗೇರ, ಸೈಬಣ್ಣ ಕೂಡಿಕಾರ, ಸೇರಿದಂತೆ ಇನ್ನಿತರರಿದ್ದರು.