ಸಾರಾಂಶ
- ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಧರ್ಮ, ಅರ್ಥ, ಕಾಮ, ಮೋಕ್ಷ ಈ ಚತುರ್ವಿಧ ಪುರುಷಾರ್ಥಗಳ ಕಲ್ಪನೆಯಿಂದಲೇ ನನ್ನ ಕೃತಿಗಳಲ್ಲಿ ಪಾತ್ರಗಳು ಸೃಷ್ಟಿ ಯಾಗುತ್ತವೆ ಎನ್ನುತ್ತಿದ್ದ ಡಾ.ಎಸ್.ಎಲ್.ಭೈರಪ್ಪ ಅವರಲ್ಲಿದ್ದ ಸಾಹಿತ್ಯ, ತತ್ತ್ವ ಸಿದ್ಧಾಂತದ ಆಳವಾದ ಜ್ಞಾನ ಮಹತ್ವದ್ದು. ಬದುಕಿನ ವಿಶಾಲ ಅರ್ಥ ನೀಡುವ ಸಂಪುಟದೊಂದಿಗೆ ಮಾತನಾಡಿದ ಅನುಭವ ಅವರ ಒಡನಾಟದಲ್ಲಿ ಆಗುತ್ತಿತ್ತು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಹೇಳಿದರು.
ನಗರದ ಬ್ರಹ್ಮಸಮುದ್ರ ರಂಗಣ್ಣನವರ ಛತ್ರದಲ್ಲಿ ಬ್ರಾಹ್ಮಣ ಮಹಾಸಭಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಾಂಸ್ಕೃತಿಕ ಸಂಘ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಖ್ಯಾತ ಕಾದಂಬರಿಕಾರ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿದರು.ಲೇಖಕ ತನ್ನ ಅನುಭವ ಶೋಧನೆ ಮತ್ತು ತವಕ ತಲ್ಲಣಗಳನ್ನು ಓದುಗರಿಗೆ ತಲುಪಿಸಬೇಕು. ಅದು ಸಾಹಿತ್ಯ ರಚನೆಯ ಮುಖ್ಯ ಉದ್ದೇಶವಾಗಬೇಕು ಎಂದು ಪ್ರತಿಪಾದಿಸುತ್ತಿದ್ದ ಅವರು, ಸಾಹಿತ್ಯವನ್ನು ಎಡ ಅಥವಾ ಬಲ ಎಂದು ವಿಭಾಗಿಸಲು ಸಾಧ್ಯವಿಲ್ಲ. ಯಾವುದೋ ಸಿದ್ಧಾಂತದ ಪ್ರತಿಪಾದನೆಯೂ ಅದಲ್ಲ. ಯಾವುದೇ ಸಿದ್ಧಾಂತಕ್ಕೆ ಒಳಗಾಗದೆ ಮನುಷ್ಯನ ಮೂಲಭೂತ ತಾಕಲಾಟಗಳನ್ನು ತಿಳಿಸುವ ಹಾಗಿದ್ದಲ್ಲಿ ಮಾತ್ರ ಆ ಕೃತಿ ಹೆಚ್ಚು ಕಾಲ ಉಳಿಯಲು ಸಾಧ್ಯ ಎಂದಿದ್ದರು ಎಂದು ಹೇಳಿದರು.ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ಕಾದಂಬರಿಯನ್ನು ಮಾತ್ರವೇ ತಮ್ಮ ಅಭಿವ್ಯಕ್ತಿ ಮಾಧ್ಯಮ ವನ್ನಾಗಿ ಮಾಡಿಕೊಂಡು ಕಾದಂಬರಿಗಾಗಿಯೇ ಪದ್ಮಭೂಷಣ ಪಡೆದ ಭಾರತದ ಹೆಮ್ಮೆಯ ಲೇಖಕ ಡಾ.ಎಸ್.ಎಲ್.ಭೈರಪ್ಪ. ಒಬ್ಬ ಲೇಖಕನ ಎಲ್ಲ ಬರವಣಿಗೆಗಳು ರಚಿಸಬೇಕೆಂದೇನಿಲ್ಲ. ಶ್ರೇಷ್ಠವಾಗಿರಬೇಕೆಂದೇನಿಲ್ಲ. ಶ್ರೇಷ್ಠತೆ ಎನ್ನುವುದೇ ಜನರಲ್ಲಿ ರುವ ಒಂದು ವ್ಯಸನ ಎಂದು ಭೈರಪ್ಪನವರು ಹೇಳಿದ್ದರು ಎಂದರು.
ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಮಾತನಾಡಿ, ಡಾ.ಭೈರಪ್ಪನವರು 1976 ರಲ್ಲಿ 734 ಪುಟಗಳಿರುವ ಬೃಹತ್ ಕಾದಂಬರಿ ‘ಪರ್ವ " ಪ್ರಕಟಿಸಿದರು. ಇದು ಪಡೆದಷ್ಟು ಜನಪ್ರಿಯತೆಯನ್ನು ಮತ್ಯಾವ ಕಾದಂಬರಿಯೂ ಪಡೆಯಲಿಲ್ಲ. ಆದರೆ, 69 ಬಾರಿ ಮುದ್ರಣ ಕಂಡಿರುವುದು ಅವರ ‘ಆವರಣ’ ಕಾದಂಬರಿ. ಏಷಿಯಾದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಲೇಖಕ ಡಾ.ಎಸ್.ಎಲ್.ಭೈರಪ್ಪ. ಅವರ ಸಾಹಿತ್ಯರಚನೆಗೆ ಹುಟ್ಟು ಮತ್ತು ಸಾವು ಹೆಚ್ಚು ಕಾಡಿದ್ದವು. ಅವರ ತಾಯಿಯ ಪ್ರೀತಿ ಮತ್ತು ಬಡತನದ ಜೊತೆಗೆ ಅಧ್ಯಯನ ಮತ್ತು ಕ್ಷೇತ್ರ ಕಾರ್ಯ ಪ್ರೇರಣೆಯಾಗಿದ್ದವು. ಈ ನಾಲ್ಕು ಇರುವವರು ಮಾತ್ರಗಟ್ಟಿ ಯಾಗಿರುವ ಸಾಹಿತ್ಯ ರಚಿಸಲು ಸಾಧ್ಯ. ಅನುಭವ ಆಳಕ್ಕೆ ಹೋಗಿರುವವರ ಸಾಹಿತ್ಯ ಸೃಷ್ಟಿ ದೀರ್ಘಕಾಲ ಉಳಿಯುತ್ತದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸರಸ್ವತಿ ಸಮ್ಮಾನ್ ಪಡೆದುಕೊಂಡ ಭೈರಪ್ಪನವರು, ಅದರಿಂದ ಬಂದ ಸಂಭಾವನೆಯನ್ನು ವಿದ್ಯಾಸಂಸ್ಥೆಯೊಂದಕ್ಕೆ ನೀಡಿ ಪ್ರಶಸ್ತಿ ಬರುತ್ತದೆ ಎನ್ನುವುದು ಮುಖ್ಯವಲ್ಲ. ತಾವು ಬರೆದ ಕಾದಂಬರಿ ನೂರು ವರ್ಷ ಉಳಿದು ಇನ್ನೊಂದು ತಲೆಮಾರಿನವರೂ ಅದನ್ನು ತೆರೆದು ನೋಡುವಂತಾದರೆ ತಾವು ಬರೆದಿರುವುದು ಸಾರ್ಥಕವಾಗುತ್ತದೆ ಎಂದಿದ್ದರು ಎಂದು ತಿಳಿಸಿದರು.ಕುವೆಂಪು ವಿದ್ಯಾನಿಕೇತನ ಸಂಸ್ಥೆ ಮುಖ್ಯಸ್ಥ ಕೆ.ಸಿ.ಶಂಕರ್ ಮಾತನಾಡಿ, ಡಾ.ಎಸ್.ಎಲ್.ಭೈರಪ್ಪನವರ ಅಧ್ಯಯನ ಶೀಲತೆಯ ಆಳ ಅಗಲ ವೈಶಾಲ್ಯಗಳು ಅತ್ಯಂತ ಹಿರಿದಾದುದು. ಇತಿಹಾಸಕಾರ, ಸಮಾಜವಾದಿ, ಮನಶ್ಯಾಸ್ತ್ರಜ್ಞ ಇವೆಲ್ಲವೂ ಸಮ್ಮಿಳನಗೊಂಡಿದ್ದ ವ್ಯಕ್ತಿತ್ವ ಅವರದು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬೋಧಕರಾಗಿದ್ದ ವಿದ್ವಾಂಸ ಯಮುನಾಚಾರ್ಯರು ಭೈರಪ್ಪನವರ ಗುರುಗಳು ಎಂದರು.
ಲೇಖಕಿ ತನ್ಮಯಿ ಪ್ರೇಮ್‌ಕುಮಾರ್ ಮಾತನಾಡಿ, ಸಂಪ್ರದಾಯವಾದಿ ಎಂದು ಜೀವನವಿಡೀ ಟೀಕೆಗೆ ಒಳಗಾಗಿದ್ದ ಡಾ.ಭೈರಪ್ಪನವರು ತಮ್ಮ ಮಾನಸ ಪುತ್ರಿ ಸಹನಾ ವಿಜಯಕುಮಾರ್ ಸಂಸ್ಕಾರ ನೆರವೇರಿಸುವಂತೆ ಹೇಳುವ ಮೂಲಕ ಒಬ್ಬ ಹೆಣ್ಣು ಮಗಳಿಗೆ ಈ ಅಧಿಕಾರ ನೀಡಿ ತಾವು ಉದಾರವಾದಿ ಎಂದು ನಿರೂಪಿಸಿದ್ದರು. ಅವರು ಸಮಾಜಕ್ಕೆ ಏನಾದ ರೊಂದು ಕೊಡಬೇಕು ಎನ್ನುವ ಆಲೋಚನೆಯ ಆಚೆಗೆ ನಿರಂತರ ಅಧ್ಯಯನಕ್ಕೆ ಒಳಪಡಿಸುವ ಅವರ ಕಾದಂಬರಿಗಳ ಮುಖೇನ ನಮ್ಮನ್ನು ರಸಾಸ್ವಾದನೆಗೆ ಹಚ್ಚಿದವರು. ಹೀಗಾಗಿ ಅವರು ರಸ ಸಿದ್ಧರು ಎಂದು ಬಣ್ಣಿಸಿದರು.ಸ್ವಾಗತಿಸಿದ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಗಾಯಕರಾದ ಎಂ.ಎಸ್.ಸುಧೀರ್, ರೇಖಾ ಪ್ರೇಮ್‌ಕುಮಾರ್, ಅನುಷ, ಮೇಘ, ಜ್ಯೋತಿ ವಿನೀತ್ ಅವರಿಂದ ಗೀತಗಾಯನ, ಸಂಗೀತ ಶಿಕ್ಷಕಿ ಶಶಿಕಲಾ ಶಿವಶಂಕರ್ ಅವರಿಂದ ಗದುಗಿನ ಕುಮಾರವ್ಯಾಸರ ಪದ್ಯಗಳ ಗಮಕ ವಾಚನ ನಡೆಯಿತು. ಶಿಕ್ಷಕಿ ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು. ಬಿಎಂಎಸ್ ಉಪಾಧ್ಯಕ್ಷ ಎ.ವಿ.ಅನಂತರಾಮಯ್ಯ ವಂದಿಸಿದರು.
20 ಕೆಸಿಕೆಎಂ 1ಚಿಕ್ಕಮಗಳೂರಿನ ಬ್ರಹ್ಮಸಮುದ್ರ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಖ್ಯಾತ ಕಾದಂಬರಿಕಾರ, ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.