ವೀರಶೈವ ಸಮಾಜದ ಧ್ವನಿಯಾಗಿ ಬದುಕಿದ ಡಾ. ಭೀಮಣ್ಣ ಖಂಡ್ರೆ ಅಗಲಿಕೆ ಲಿಂಗಾಯತ ಸಮಾಜವನ್ನು ದುಃಖಸಾಗರದಲ್ಲಿ ಮುಳುಗಿಸಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಕೋರಧಾನ್ಯಮಠ ಹೇಳಿದರು.

ರಾಣಿಬೆನ್ನೂರು: ವೀರಶೈವ ಸಮಾಜದ ಧ್ವನಿಯಾಗಿ ಬದುಕಿದ ಡಾ. ಭೀಮಣ್ಣ ಖಂಡ್ರೆ ಅಗಲಿಕೆ ಲಿಂಗಾಯತ ಸಮಾಜವನ್ನು ದುಃಖಸಾಗರದಲ್ಲಿ ಮುಳುಗಿಸಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಕೋರಧಾನ್ಯಮಠ ಹೇಳಿದರು. ನಗರದ ಚೆನ್ನೇಶ್ವರಮಠದಲ್ಲಿ ಶನಿವಾರ ಸಂಜೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಜಂಗಮ ಸಮಾಜ ಹಾಗೂ ನೌಕರರ ವೇದಿಕೆ ವತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಗೌರವ ಅಧ್ಯಕ್ಷ ಡಾ. ಭೀಮಣ್ಣ ಖಂಡ್ರೆ ನಿಧನ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಖಂಡ್ರೆ ಸಮಾಜದ ಪಿತಾಮಹನಂತೆ ಎಲ್ಲರ ಹೃದಯಗಳಲ್ಲಿ ನೆಲೆಸಿದವರು. ವೀರಶೈವ ಲಿಂಗಾಯತ ಸಮಾಜದ ಏಕತೆ, ಗೌರವ, ಹಕ್ಕು ಮತ್ತು ಮಾನವೀಯ ಮೌಲ್ಯಗಳಿಗಾಗಿ ಅವರು ಉಸಿರಾಡಿದ ಪ್ರತಿಕ್ಷಣವೂ ಸಮರ್ಪಿತವಾಗಿತ್ತು. ಅವರ ಮಾತುಗಳಲ್ಲಿ ಧೈರ್ಯವಿತ್ತು, ನಡೆಗಳಲ್ಲಿ ಸರಳತೆ ಇತ್ತು, ಕಾರ್ಯಗಳಲ್ಲಿ ತ್ಯಾಗದ ಹೊಳಪು ಕಾಣುತ್ತಿತ್ತು ಎಂದರು. ಜಂಗಮ ಸಮಾಜ ಹಾಗೂ ನೌಕರರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಜಗದೀಶ ಮಳಿಮಠ ಮಾತನಾಡಿ, ಖಂಡ್ರೆ ಅವರ ಅಗಲಿಕೆಯಿಂದ ಸಮಾಜಕ್ಕೆ ಭರಿಸಲಾಗದ ಶೂನ್ಯ ಉಂಟಾಗಿದೆ. ಆ ನೋವು ಪ್ರತಿಯೊಬ್ಬ ಸಮಾಜಬಂಧುವಿನ ಹೃದಯದಲ್ಲಿ ಕಣ್ಣೀರಾಗಿ ಹರಿಯುತ್ತಿದೆ. ಆದರೂ ಅವರ ಆದರ್ಶಗಳು, ಚಿಂತನೆಗಳು ಮತ್ತು ಸೇವಾ ಪರಂಪರೆ ಸದಾ ನಮ್ಮ ದಾರಿ ದೀಪವಾಗಿರಲಿದೆ ಎಂದರು. ಎಫ್.ಕೆ. ಭಸ್ಮಾಂಗಿಮಠ, ಕಟಗಿಹಳ್ಳಿ, ವಿನೋಜ ಜಂಬಗಿ, ಉಮೇಶ ಗುಂಡಗಟ್ಟಿ, ಶಿವಯೋಗಿ ಹಿರೇಮಠ, ಕೆ.ಎಸ್. ಮಳೆಮಠ, ಗಂಗಾಧರ ಮಠದ, ಸುನಂದಮ್ಮ ತಿಳುವಳ್ಳಿ ಗಾಯತ್ರಮ್ಮ ಕುರುವತ್ತಿ, ಕಸ್ತೂರಮ್ಮ ಪಾಟೀಲ, ಭಾಗ್ಯಶ್ರೀ ಗುಂಡಗಟ್ಟಿ, ಕವಿತಾ, ಎಮ್.ಕೆ. ಹಾಲಸಿದ್ದಯ್ಯ ಮತ್ತಿತರರಿದ್ದರು.