ಸಾರಾಂಶ
ಕಲಘಟಗಿ: ಸಮಬಾಳು, ಸಮಾನತೆ, ಮಹಿಳಾ ಸಮಾನತೆ, ಸಮತತ್ವದ ಮೇಲೆ ಸಂವಿಧಾನ ರಚಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಡೀ ದೇಶಕ್ಕೆ ಸಮಾನತೆ ತತ್ವ ಸಾರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಭಾರತದ ಸಂವಿಧಾನ ರಚನೆಯಾಗಿ 75 ವರ್ಷಗಳು ಪೂರೈಸಿದ ಅಂಗವಾಗಿ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರಗಳ ಮೆರವಣಿಗೆಯನ್ನು ತಾಲೂಕಿನ ದೇವಲಿಂಗಿಕೊಪ್ಪ ಗ್ರಾಮದಲ್ಲಿ ಸ್ವಾಗತಿಸಿ ಮಾತನಾಡಿದರು.12ನೇ ಶತಮಾನದ ಬಸವಣ್ಣನವರ ಚಿಂತನೆಗಳಿಗೆ ಮತ್ತೆ ಮರು ಜನ್ಮ ನೀಡಿದವರು ಡಾ. ಬಿ.ಆರ್. ಅಂಬೇಡ್ಕರ್. ದೇಶದ ಜನರ ಆತ್ಮಗೌರವ, ಹಕ್ಕುಗಳನ್ನು ಸಂವಿಧಾನದ ಎತ್ತಿ ಹಿಡಿದಿದೆ. ಸಮಾನತೆಯೇ ಸಂವಿಧಾನದ ಸೌಂದರ್ಯವಾಗಿದೆ. ಸಂವಿಧಾನದ ಆಶಯದ ಮೇಲೆ ದೇಶ ನಡೆಯುತ್ತಿದ್ದು, ಅದರ ಮಹತ್ವ ಮತ್ತು ಮೌಲ್ಯದ ಅರಿವನ್ನು ಪ್ರತಿಯೊಬ್ಬರು ಹೊಂದಬೇಕು ಎಂದು ಹೇಳಿದರು.
ಎತ್ತಿನ ಚಕ್ಕಡಿಯಲ್ಲಿ ಮೆರವಣಿಗೆ:ಸಚಿವ ಸಂತೋಷ ಲಾಡ್ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಂವಿಧಾನ ಜಾಗೃತಿ ಜಾಥಾಗೆ ಸ್ವಾಗತ ಕೋರಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಸ್ವತಃ ಸಚಿವರೇ ಎತ್ತಿನ ಚಕ್ಕಡಿ ಚಲಾಯಿಸುವ ಮೂಲಕ ಮೆರವಣಿಗೆಯಲ್ಲಿ ಗಮನಸೆಳೆದರು.
ವಿವಿಧ ಜನಪದ ಕಲಾ ತಂಡಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಗ್ರಾಪಂ ಸದಸ್ಯರು, ಮುಖಂಡರು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿ ಸಂವಿಧಾನದ ಜಾಗೃತಿ ಮೂಡಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ ವಾಚಿಸಲಾಯಿತು. ಸಂವಿಧಾನದ ಮಹತ್ವದ ಕುರಿತು ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಅಲ್ಲಾಭಕ್ಷ ಎಂಎಸ್., ಸಚಿವರ ಆಪ್ತ ಸಹಾಯಕ ಹರಿಶಂಕರ ಮಠದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮುರಳ್ಳಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರಾದ ಎ.ಜೆ. ಯೋಗಪ್ಪನವರ, ತಾಪಂ ಇಒ ಪರಶುರಾಮ ಸಾವಂತ, ಸಿಪಿಐ ಶ್ರೀಶೈಲ ಕೌಜಲಗಿ, ಆರ್.ಆರ್. ಕುಂಬಾರ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.