ಮಹಿಳಾ ಸಬಲೀಕರಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್‌ ಕೊಡುಗೆ ಅಪಾರ

| Published : Mar 17 2025, 12:30 AM IST

ಸಾರಾಂಶ

ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಮಂಜುನಾಥ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ ಬೆಳ್ಳಿ ಮಹೋತ್ಸವ ಅಂಗವಾಗಿ ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರು ಸಂವಿಧಾನ ರಚಿಸಿಕೊಟ್ಟ ನಂತರದ ದಿನಗಳಲ್ಲಿ ನಾಲ್ಕು ಗೋಡೆಗೆ ಸೀಮಿತವಾಗಿದ್ದ ಮಹಿಳೆ ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು ಪುರುಷರಂತೆ ಬದುಕಲು ಅವಕಾಶ ಮಾಡಿಕೊಟ್ಟಂತಹ ವ್ಯಕ್ತಿಗಳನ್ನು ಒಂದು ವರ್ಗ, ಜಾತಿಗೆ ಸೀಮಿತ ಮಾಡದೆ ಅವರನ್ನು ಸಾರ್ವತ್ರಿಕ, ಮಾದರಿ ವ್ಯಕ್ತಿ ಯಾಗಿ ಸ್ವೀಕರಿಸಬೇಕಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಚೇತನ ಕಲಾವಾಹಿನಿ ಸಂಸ್ಥೆಯು ರಮಾಬಾಯಿ ಅಂಬೇಡ್ಕ‌ರ್ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನಿಜಕ್ಕೂ ಒಂದು ಅರ್ಥಪೂರ್ಣವಾದದ್ದು ಎಂದರು.

ವಕೀಲರಾದ ವೇದ ಶಾಂತರಾಜು ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಮಾ. 8 ರಂದು ಆಚರಿಸಲಾಗುತ್ತದೆ. ಮಹಿಳೆಯರ ಸಾಧನೆಗಳನ್ನು ನೆನೆಯಲಾಗುತ್ತದೆ. ದೇಶದಲ್ಲಿರುವ ಮಹಿಳೆಯರಿಗೆ ಶಿಕ್ಷಣ ಹಕ್ಕು, ಆಸ್ತಿಯ ಹಕ್ಕು ಸೇರಿದಂತೆ ಹಲವಾರು ಹಕ್ಕುಗಳನ್ನು ಸಂವಿಧಾನದ ಮೂಲಕ ಅಂಬೇಡ್ಕ‌ರ್ ಅವರು ಕಲ್ಪಿಸಿಕೊಟ್ಟಿದ್ದಾರೆ. ಅಂಬೇಡ್ಕ‌ರ್ ಆಶಯಗಳು ಈಡೇರಬೇಕಾದರೆ ಎಲ್ಲ ಹಕ್ಕುಗಳು ಮಹಿಳೆಯರನ್ನು ತಲುಪಬೇಕಿದೆ ಎಂದರು.

ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ:

ಶಿಕ್ಷಕಿ ಬಿ.ಎಸ್. ಲತಾ, ರಾಜೇಶ್ವರಿ ಡಿ.ಪಿ.ರಾಜು ದೇಶವಳ್ಳಿ ಅವರಿಗೆ ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜನಪದ ಗಾಯಕರಾದ ಲಕ್ಷ್ಮಮ್ಮ ಯರಿಯೂರು, ಪುಟ್ಟಮಾದಮ್ಮ, ಸುಬ್ಬಮ್ಮ, ಮುದ್ದಮ್ಮ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ರಾಮಸಮುದ್ರ ನಾಗರಾಜು, ಅಂತಾರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ಕಾರ್ಯದರ್ಶಿ ಎಂ.ಮಂಜುನಾಥ್, ಎಂ.ಪುಟ್ಟಸ್ವಾಮಿ, ಹೊನ್ನಮ್ಮ, ಚಿನ್ನಮ್ಮ, ಯುವ ಕಾಂಗ್ರೆಸ್ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಮಸಮುದ್ರ ಅಕ್ಷಯ್, ವಿದ್ಯಾರ್ಥಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸ್ವಾಮಿ, ತೀರ್ಥ, ನಾರಾಯಣ, ಪರ್ವತ, ಆಟೋ ನಾಗೇಂದ್ರ, ಇತರರು ಹಾಜರಿದ್ದರು.