ಯುವಜನತೆ ಉತ್ತರ ಕರ್ನಾಟಕ ಜಾನಪದ ಕುಣಿತಗಳನ್ನು ಕಲಿಯಲಿ: ಡಾ. ಬಾಳಣ್ಣ ಶೀಗಿಹಳ್ಳಿ

| Published : Mar 17 2025, 12:30 AM IST

ಯುವಜನತೆ ಉತ್ತರ ಕರ್ನಾಟಕ ಜಾನಪದ ಕುಣಿತಗಳನ್ನು ಕಲಿಯಲಿ: ಡಾ. ಬಾಳಣ್ಣ ಶೀಗಿಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕ ಹಲವಾರು ಜಾನಪದ ಕುಣಿತಗಳನ್ನು ಇಂದಿನ ಯುವ ಜನಾಂಗ ಕಲಿತು ಪ್ರದರ್ಶಿಸಬೇಕಾಗಿದೆ ಎಂದು ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು.

ಧಾರವಾಡ: ಹಬ್ಬ-ಹರಿದಿನಗಳ ಮೂಲಕ ಸಂಪ್ರದಾಯ ಕಲೆ ಹಾಗೂ ಪ್ರದರ್ಶನ ಕಲೆಗಳನ್ನು ಇಂದಿನ ಯುವ ಪೀಳಿಗೆಗೆ ಹಾಗೂ ಶಾಲಾ ಕಾಲೇಜುಗಳಿಗೆ ಕಲಿಸುವುದರ ಮೂಲಕ ಜಾನಪದ ಸಂಶೋಧನಾ ಕೇಂದ್ರ ತನ್ನ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಾನಪದ ಸಂಶೋಧನಾ ಕೇಂದ್ರದಿಂದ ನಡೆದ ಡಾ. ಪ್ರಭಾ ನೀರಲಗಿ ದತ್ತಿ ಹಾಗೂ ಮಹಿಳೆಯರಿಗಾಗಿ ಜಾನಪದ ನೃತ್ಯ ಸ್ಪರ್ಧೆಯ ಉದ್ಘಾಟನೆ ಮಾಡಿ ಮಾತನಾಡಿದರು.

ಉತ್ತರ ಕರ್ನಾಟಕ ಹಲವಾರು ಜಾನಪದ ಕುಣಿತಗಳನ್ನು ಹೊಂದಿದ್ದು ಡೊಳ್ಳು, ಹೆಜ್ಜೆಮೇಳ, ಬೈಲಾಟ ಕುಣಿತಗಳು ಮುಂತಾದ ಪ್ರದರ್ಶನ ಕಲೆಗಳ ಮೂಲಕ ಪ್ರಸಿದ್ಧಿಯಾಗಿದೆ. ಅವುಗಳನ್ನು ಇಂದಿನ ಯುವ ಜನಾಂಗ ಕಲಿತು ಪ್ರದರ್ಶಿಸಬೇಕಾಗಿದೆ. ಜಾನಪದ ಸದಾ ಜೀವಂತವಾಗಿರಲು ಇಂತಹ ಕಾರ್ಯಕ್ರಮಗಳಾಗಬೇಕು ಎಂದರು.

ಮಹಿಳೆಯರಿಂದಲೇ ನಮ್ಮ ಸಂಸ್ಕೃತಿ ಹಾಗೂ ಜಾನಪದ ಕಲೆಗಳು ಉಳಿಯಲು ಸಾಧ್ಯವಾಗುತ್ತಿದೆ. ಏನೆಲ್ಲ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಮಹಿಳಾ ಸಂಘಟನೆಗಳ ಮೂಲಕ ಅವರು ವಯಸ್ಸನ್ನು ಮರೆತು ವೇಷಭೂಷಣಗಳ ಧರಿಸಿ ಹೆಜ್ಜೆ ಹಾಕುವುದರ ಮೂಲಕ ಲವಲವಿಕೆಯಿಂದ ತಮ್ಮ ಪ್ರದರ್ಶನವನ್ನು ನೀಡಿದ್ದು ಖುಷಿ ತಂದಿದೆ. ಈ ಮೂಲಕ ಮಹಿಳೆಯರು ತಮ್ಮ ಬದುಕನ್ನು ಸುಂದರಗೊಳಿಸುತ್ತಿದ್ದಾರೆ. ಮಹಿಳೆಯಲ್ಲಿರುವ ಪ್ರತಿಭೆಗೆ ಕೇಂದ್ರ ಪ್ರೋತ್ಸಾಹ ನೀಡುತ್ತಿದೆ. ಧಾರವಾಡ ಮಹಿಳೆಯರು, ಮಹಿಳಾ ಮಂಡಳಗಳೂ ಜಾನಪದ ಒಡಪು, ಒಗಟು, ಗಾದೆ ಮಾತುಗಳು ಮುಂತಾದವುಗಳತ್ತ ತಮ್ಮ ಗಮನ ಹರಿಸಿ ಅವುಗಳ ಸಂಗ್ರಹವನ್ನು ಮಾಡಬೇಕು ಎಂದರು.

ನಿರ್ಣಾಯಕರಾಗಿ ಆಗಮಿಸಿದ ಡಾ. ಪ್ರಕಾಶ ಮಲ್ಲಿಗವಾಡ ಮಾತನಾಡಿ, ಡಾ. ಪ್ರಭಾ ನೀರಲಗಿ ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿ ಜನಪದ ಕಲೆಗಳ ಉಳಿವಿಗಾಗಿ ಶ್ರಮಿಸಿದರು. ವರ್ಷಕ್ಕೊಮ್ಮೆ ಜಾನಪದ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ತಮ್ಮನ್ನು ನಿರಂತರವಾಗಿ ನೆನಪಿಟ್ಟುಕೊಳ್ಳುವಂತೆ ಮಾಡಿದ್ದಾರೆ ಎಂದರು.

ಗುರು ಕಲ್ಮಠ, ವಿದುಷಿ ರೋಹಿಣಿ ಇಮಾರತಿ, ಸಂದೀಪ ನೀರಲಗಿ, ಡಾ. ಸಂಜಯ ನೀರಲಗಿ, ವಿಶ್ವೇಶ್ವರಿ ಹಿರೇಮಠ ಇದ್ದರು. ಜಾನಪದ ನೃತ್ಯ ಸ್ಪರ್ಧೆಯಲ್ಲಿ 14 ಮಹಿಳಾ ಮಂಡಳಗಳು ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ರಂಜನಿ ಸಂಸ್ಕೃತಿಕ ಕಲಾ ಬಳಗ, ದ್ವಿತೀಯ ಬಹುಮಾನವನ್ನು ಪ್ರಿಯಕಾರಿಣಿ ಮಹಿಳಾ ಮಂಡಳ, ತೃತೀಯ ಬಹುಮಾನವನ್ನು ವನಸಿರಿ ಮಹಿಳಾ ಮಂಡಳ ಹಾಗೂ ಸಿಂಗಾರ ಸಖಿ ಮಹಿಳಾ ಮಂಡಳ ಸಮಾಧಾನಕರ ಬಹುಮಾನವನ್ನು ಪಡೆದರು. ಎಲ್ಲ ಮಹಿಳಾ ಮಂಡಳಗಳಿಗೆ ಪ್ರಮಾಣ ಪತ್ರ ಹಾಗೂ ನಗದು ನೀಡಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ನಾಗಭೂಷಣ ಹಿರೇಮಠ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ಹಡಗಲಿ ವಂದಿಸಿದರು. ಕಾವ್ಯ ಹಾಗೂ ಅಂಜಲಿ ನಿರೂಪಿಸಿದರು.