ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳ ಹೊರಗಿಡುವ ಪ್ರಯತ್ನ ಮಾಡಬಾರದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಹೇಳಿದರು.ಚಿತ್ರದುರ್ಗ ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಹಾಗೂ ತಾಲೂಕು ಚುನಾಯಿತ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪಠ್ಯ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದೆ. ಅವರನ್ನು ತೊಡಗಿಸಿಕೊಳ್ಳವಂತೆ ಮಾಡಲು ದೈಹಿಕ ಶಿಕ್ಷಕನ ಪಾತ್ರ ಅತಿ ಮುಖ್ಯವಾಗಿದೆ ಎಂದರು.
ಮಕ್ಕಳು ಮಾನಸಿಕವಾಗಿ ಸಧೃಡರಾಗಿದ್ದಾರಷ್ಟೇ ಸಾಲದು, ದೈಹಿಕವಾಗಿಯೂ ಸಬಲರಾಗಿ ಇರುವಂತೆ ನೋಡಿಕೊಳ್ಳಬೇಕು. ಕ್ರೀಡೆಗಳು ಮಾತ್ರ ಪೂರಕವಾಗಿ ಕಾರ್ಯನಿರ್ವಹಿಸಬಲ್ಲವು. ಸಾಮಾನ್ಯ ವಿಷಯ ಭೋಧಿಸುವ ಶಿಕ್ಷಕರಿಗೆ ಇರುವಷ್ಟೇ ಪ್ರಾಧಾನ್ಯತೆ ದೈಹಿಕ ಶಿಕ್ಷಕರಿಗೂ ಇರುತ್ತದೆ. ಅವರಿಬ್ಬರೂ ಸಮಾನರು ಎಂಬುದು ಮರೆಯಬಾರದೆಂದರು.ಶಾಲೆಯಲ್ಲಿ ದೈಹಿಕ ಶಿಕ್ಷಕರಿದ್ದರೆ ಅಲ್ಲಿನ ಮಕ್ಕಳಲ್ಲಿ ಶಿಸ್ತು, ಸಂಯಮ, ಶಿಷ್ಠಾಚಾರ ಪಾಲನೆಯಾಗುತ್ತದೆ. ಮಕ್ಕಳಲ್ಲಿ ಸಮಯ ಪ್ರಜ್ಞೆ ಮೂಡುತ್ತದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಸಾಮಾನ್ಯ ಶಿಕ್ಷಕರ ಪಾತ್ರದ ಜೊತೆಗೆ ದೈಹಿಕ ಶಿಕ್ಷಕರ ಪಾತ್ರವೂ ಅತಿ ಮುಖ್ಯವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಕರ ಪಾತ್ರವೂ ಸಹಾ ಮುಖ್ಯವಾಗಿದೆ. ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರು ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಬೇರೆ ಕಡೆಯಿಂದ ಬಂದ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆಂದು ಮಂಜುನಾಥ್ ಪ್ರಶಂಶಿಸಿದರು.
ಪೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ದೈಹಿಕ ಶಿಕ್ಷಕರ ಸಂಘಕ್ಕೆ ನಮ್ಮ ಸಂಘವೂ ಸಹಾ ಸದಾ ಬೆಂಬಲ ನೀಡಲಿದೆ, ನಿಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ನಾವು ಸಹಾ ಕೈಜೋಡಿಸುತ್ತೇವೆ. ಒಗ್ಗಟ್ಟು ಪ್ರದರ್ಶನ ಮಾಡಿ ಸಂಘ ಸದಾ ಕ್ರಿಯಾಶೀಲವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಸಲಹೆ ಮಾಡಿದರು.ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ ಮಾತನಾಡಿ, ದೈಹಿಕ ಶಿಕ್ಷಕರಿಲ್ಲದ ಶಾಲೆ ದೇವರಿಲ್ಲದ ಗುಡಿ ಇದ್ದಂತೆ. ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಶಿಕ್ಷಕರು ಇರಲೇ ಬೇಕಿದೆ. ಇವರಿಂದ ಮಾತ್ರ ಮಕ್ಕಳು ದೈಹಿಕವಾಗಿ ಸಮರ್ಥರಾಗಲು ಸಾಧ್ಯ. ಮಕ್ಕಳ ಸರ್ವತೋಮುಖ ಅಭಿವೃದ್ದಿಯಲ್ಲಿ ಇವರ ಪಾತ್ರ ಹೆಚ್ಚಿನ ರೀತಿಯಲ್ಲಿ ಇದೆ. ಮಕ್ಕಳಲ್ಲಿ ಶಿಸ್ತು ಮೂಡಲು ದೈಹಿಕ ಶಿಕ್ಷಕರ ಶ್ರಮ ಹೆಚ್ಚಾಗಿದೆ ಎಂದರು.
ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಮಹಾಲಿಂಗಪ್ಪ, ಡಿಪಿಇಓ ಚಿದಾನಂದಪ್ಪ, ಟಿಪಿಇಓ ಚನ್ನಬಸಪ್ಪ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಿವಾಕರ, ರಾಜ್ಯ ಪರಿಷತ್ ಸದಸ್ಯ ರಾಜಪ್ಪ, ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ಪ, ಯೋಗೀಶ್ ಕೊಂಡಾಪುರ, ಲತಾ, ಅಶೋಕ್, ಮೈಲಾರಪ್ಪ, ಕೆಂಚಪ್ಪ, ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ್ ಭಾಗವಹಿಸಿದ್ದರು.ವಿಜಯಪ್ರಸಾದ್ ಪ್ರಾರ್ಥಿಸಿದರೆ. ಚನ್ನಬಸಪ್ಪ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಪಾಂಡುರಂಗಪ್ಪ ಪ್ರಸ್ತಾವಿಕ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲ್ಲೇಶ್ ನಿರೂಪಿಸಿದರು.