ಸಾರಾಂಶ
ವಿವಿ ತನ್ನದೇ ಆದ ಹಿರಿಮೆ ಹೊಂದಿದ್ದು, ಶೈಕ್ಷಣಿಕ, ಸಾಹಿತ್ಯಿಕ ಮತ್ತು ಕಲಾ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಕವಿವಿ ಈ ಪ್ರಶಸ್ತಿ ನೀಡುತ್ತಿರುವದಕ್ಕೆ ಋಣಿಯಾಗಿದ್ದೇನೆ
ಧಾರವಾಡ: ಎಲ್ಲ ಪ್ರಶಸ್ತಿಗಿಂತ ತವರು ಮನೆಯಂತಿರುವ ಕರ್ನಾಟಕ ವಿಶ್ವವಿದ್ಯಾಲಯ ನೀಡಿರುವ ಅರಿವೇ ಗುರು ಪ್ರಶಸ್ತಿ ಸಂತಸ ತಂದಿದೆ ಎಂದು ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿಯೋಗವು ಬೆಂಗಳೂರಿನ ಅವರ ನಿವಾಸದಲ್ಲಿ ಅರಿವೇ ಗುರು ಪ್ರಶಸ್ತಿ ನೀಡಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕವಿವಿ ತನ್ನದೇ ಆದ ಹಿರಿಮೆ ಹೊಂದಿದ್ದು, ಶೈಕ್ಷಣಿಕ, ಸಾಹಿತ್ಯಿಕ ಮತ್ತು ಕಲಾ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಕವಿವಿ ಈ ಪ್ರಶಸ್ತಿ ನೀಡುತ್ತಿರುವದಕ್ಕೆ ಋಣಿಯಾಗಿದ್ದೇನೆ. ಕವಿವಿ ವಿದ್ಯಾರ್ಥಿಯಾದ ನಾನು ಪ್ರಶಸ್ತಿ ಸ್ವೀಕರಿಸುತ್ತಿರುವುದು ಅವಿಸ್ಮರಣೀಯ ಕ್ಷಣ ಎಂದರು.
ಪ್ರಭಾರ ಕುಲಪತಿ ಪ್ರೊ. ಜಯಶ್ರೀ. ಎಸ್., ಕುಲಸಚಿವ ಡಾ. ಎ. ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವ ಡಾ. ಎನ್.ವೈ. ಮಟ್ಟಿಹಾಳ, ಸಿಂಡಿಕೇಟ್ ಸದಸ್ಯರಾದ ಶ್ಯಾಮ್ ಮಲ್ಲನಗೌಡರ, ಮಹೇಶ್ ಹುಲ್ಲೇನ್ನವರ, ಡಾ. ಬಸವರಾಜ ಗೊರವರ್, ಪ್ರಸಾರಾಂಗ ನಿರ್ದೇಶಕ ಡಾ. ಎ.ಎಂ. ಕಡಕೋಳ, ಡಾ. ಸಿದ್ದಪ್ಪ ಎನ್. ಇದ್ದರು.ಈ ಮೊದಲು ಈ ಪ್ರಶಸ್ತಿ ಪ್ರದಾನ ಸಮಾರಂಭ ಅನಿವಾರ್ಯ ಕಾರಣಗಳಿಂದ ಕವಿವಿಯಲ್ಲಿ ಆಯೋಜನೆಯಾಗಿ ಕೊನೆ ಕ್ಷಣದಲ್ಲಿ ರದ್ದಾಗಿತ್ತು.