ಸಾರಾಂಶ
ಕಮಲನಗರದಲ್ಲಿ ನಡೆದ ಪಟ್ಟದ್ದೇವರ ಭಾವಚಿತ್ರ ಮೆರವಣಿಗೆಯೂದ್ದಕ್ಕೂ ಕೋಲಾಟ, ಡೊಳ್ಳು ಕುಣಿತ, ಮಹಾರಾಷ್ಟ್ರದ ಬಾರಶಿ ಪಟ್ಟಣದ ಅಂಬ್ರೇಲ್ಲಾ ತಂಡದಿಂದ ಬ್ಯಾಂಡ್ ಛತ್ರಿ ಪ್ರದರ್ಶನ, ಜೈ ಸೇವಾಲಾಲ್ ಕಲಾ ತಂಡ ತೀರ್ಥ ತಾಂಡಾದ ಮಹಿಳೆಯರಿಂದ ನೃತ್ಯ, ವಿವಿಧ ಮಹಿಳಾ ಸಂಘದವರಿಂದ ಭಜನೆ, ಶಾಲಾ ಮಕ್ಕಳಿಂದ ಲೇಜಿಮ್ಸ್ ಹಾಗೂ ಡಾನ್ಸ್‌ಗೆ ಜನರ ಮೆಚ್ಚುಗೆ ವ್ಯಕ್ತವಾಯಿತು.
ಕನ್ನಡಪ್ರಭ ವಾರ್ತೆ ಕಮಲನಗರ
ಪಟ್ಟಣದಲ್ಲಿ ಲಿಂ. ಡಾ. ಚನ್ನಬಸವ ಪಟ್ಟದ್ದೇವರ 134ನೇಯ ಜಯಂತ್ಯುತ್ಸವದ ನಿಮಿತ್ತ ಮಂಗಳವಾರ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್ ಅಮೀತಕುಮಾರ ಕುಲಕರ್ಣಿ ಚಾಲನೆ ನೀಡಿದರು.ರಾಷ್ಟ್ರೀಯ ಹೆದ್ದಾರಿಯ ಅಕ್ಕ-ಪಕ್ಕದ ಮನೆಯವರು ತಮ್ಮ ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕಿ ಡಾ. ಚನ್ನಬಸವ ಪಟ್ಟದ್ದೇವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ಬೃಹತ್ ಮೆರವಣಿಗೆ ಚನ್ನಬಸವ ಕಾಲೋನಿಯಿಂದ ಬೆಳಗ್ಗೆ ಆರಂಭಗೊಂಡು, ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಿಂದ ಸಾಗಿ ಮಿನಿ ಬಸ್ ನಿಲ್ದಾಣ, ಸೋನಾಳ ಮುಖ್ಯರಸ್ತೆ, ಪೊಲೀಸ ಠಾಣೆ, ಚನ್ನಬಸವ ಪಟ್ಟದ್ದೇವರ ಸ್ಮಾರಕ, ಬಸವೇಶ್ವರ ವೃತ್ತ, ಗ್ರಾಮ ಪಂಚಾಯತ ಕಛೇರಿ, ಅಕ್ಕಮಹಾದೇವಿ ವೃತ್ತದಿಂದ ಸಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಶಾಖಾ ಮಠಕ್ಕೆ ತಲುಪಿತು.ಭಾವಚಿತ್ರ ಮೆರವಣಿಗೆಯೂದ್ದಕ್ಕೂ ಕೋಲಾಟ, ಡೊಳ್ಳು ಕುಣಿತ, ಮಹಾರಾಷ್ಟ್ರದ ಬಾರಶಿ ಪಟ್ಟಣದ ಅಂಬ್ರೇಲ್ಲಾ ತಂಡದಿಂದ ಬ್ಯಾಂಡ್ ಛತ್ರಿ ಪ್ರದರ್ಶನ, ಜೈ ಸೇವಾಲಾಲ್ ಕಲಾ ತಂಡ ತೀರ್ಥ ತಾಂಡಾದ ಮಹಿಳೆಯರಿಂದ ನೃತ್ಯ, ವಿವಿಧ ಮಹಿಳಾ ಸಂಘದವರಿಂದ ಭಜನೆ, ಶಾಲಾ ಮಕ್ಕಳಿಂದ ಲೇಜಿಮ್ಸ್ ಹಾಗೂ ಡಾನ್ಸ್‌ಗೆ ಜನರ ಮೆಚ್ಚುಗೆ ವ್ಯಕ್ತವಾಯಿತು.
ಕಮಲನಗರ ಸೇರಿ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಶರಣರು ಪಾಲ್ಗೊಂಡಿರುವುದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಮಿತಿ ಅಧ್ಯಕ್ಷ ಪ್ರಕಾಶ ಟೋಣ್ಣೆ, ತಾಪಂ. ಅಧಿಕಾರಿ ಮಾಣಿಕರಾವ ಪಾಟೀಲ್, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪಿಡಿಓ ರಾಜಕುಮಾರ ತಂಬಾಕೆ, ಸೇರಿದಂತೆ ಅನೇಕ ಬಸವ ಭಕ್ತರು ಪಾಲ್ಗೊಂಡಿದ್ದರು.
ಸಿಪಿಐ ಅಮರಪ್ಪ.ಎಸ್.ಶಿವಬಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಲಕ್ಷ್ಮಣ ಮಡಕೆ, ಉದಂಡಪ್ಪಾ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.