ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಓಲೆಮಠದ ಅಭಿನವ ಕುಮಾರ ಡಾ.ಚನ್ನಬಸವ ಸ್ವಾಮೀಜಿ (62) ಸವದತ್ತಿ ತಾಲೂಕು ಗೊರವಿನಕೊಳ್ಳದ ಓಲೆಮಠದ ಶಾಖಾಮಠದಲ್ಲಿ ಗುರುವಾರ ರಾತ್ರಿ ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾದರು.ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕೆಲ ದಿನಗಳಿಂದ ಗೊರವನಕೊಳ್ಳದ ಶಾಖಾ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿ ತೀವ್ರ ಅಸ್ವಸ್ಥರಾದ ಶ್ರೀಗಳನ್ನು ಸವದತ್ತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಕೊನೆಯುಸಿರೆಳೆದರು ಎಂದು ಮಠದ ಭಕ್ತರು ತಿಳಿಸಿದ್ದಾರೆ.
ಸವದತ್ತಿ ಹಾಗೂ ಗೊರವಿನಕೊಳ್ಳ ಗ್ರಾಮದಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಅಲ್ಲಿಯ ಭಕ್ತರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ನಂತರ ಜಮಖಂಡಿ ನಗರಕ್ಕೆ ಶ್ರೀಗಳ ಪಾರ್ಥಿವ ಶರೀರ ತರಲಾಯಿತು. ಸಂಜೆಯ ವರೆಗೆ ಪಾರ್ಥಿವ ಶರೀದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿಯ ಹೊತ್ತಿಗೆ ಶ್ರೀಮಠದ ಆವರಣದಲ್ಲಿ ಲಿಂಗಾಯಿತ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹಲವಾರು ಜನ ಗಣ್ಯರು, ವಿವಿಧ ಮಠಗಳ ಪೀಠಾಧಿಪತಿಗಳು ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದರು.ನಗರದ ಓಲೆ ಮಠದ ಅಭಿನವ ಕುಮಾರ ಡಾ.ಚನ್ನಬಸವ ಸ್ವಾಮೀಜಿ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ 15.06.1962ರಲ್ಲಿ ಗಂಗಮ್ಮ ಹಾಗೂ ಬಸಲಿಂಗಯ್ಯ ದಂಪತಿ ಪುತ್ರರಾಗಿ ಜನಿಸಿದರು. ಪೂರ್ವಾಶ್ರಮದಲ್ಲಿ ಇವರಿಗೆ 4 ಜನ ಸಹೋದರರು. ಮೊದಲಿನಿಂದಲೂ ಆಧ್ಯಾತ್ಮದತ್ತ ಇವರಿಗಿದ್ದ ಒಲವು ಪೀಠಾಧಿಪತಿಗಳಾಗುವಂತೆ ಮಾಡಿತು. ಬಿದರಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಬದಾಮಿ ಶಿವಯೊಗ ಮಂದಿರದಲ್ಲಿ 9 ವರ್ಷಗಳ ಕಾಲ ಶಾಸ್ತ್ರಾಭ್ಯಾಸ ಮಾಡಿದರು. ನಂತರ ಕಾಶಿ, ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಗ್ಗಿ ಮಾಯಯ್ಯದೇವರ ವಚನಗಳ ಕುರಿತು ಪ್ರಬಂಧ ಮಂಡಿಸಿ, ಪಿಎಚ್‌ಡಿ ಪದವಿ ಪಡೆದರು. ಇವರಿಗೆ ಡಾ.ಎಂ.ಎಂ.ಕಲ್ಬುರ್ಗಿ ಮಾರ್ಗದರ್ಶನ ನೀಡಿದ್ದರು.
ಒಳಬಳ್ಳಾರಿಯ ತಾತನವರು ಇವರಿಗೆ ಗುರುದೀಕ್ಷೆ ನೀಡಿದ್ದರು. ಜಮಖಂಡಿ ತಾಲೂಕಿನ ಕಡಕೋಳ, ಶಿಗ್ಗಾಂವ ತಾಲೂಕಿನ ಹುಲಗೂರು, ಸವದತ್ತಿ ತಾಲೂಕಿನ ಗೊರವಿನಕೊಳ್ಳ ಸೇರಿದಂತೆ 3 ಶಾಖಾ ಮಠಗಳಿವೆ. ಇವರ ಹಿರಿಯ ಸಹೋದರ ಅನ್ನದಾನೇಶ್ವರ ಸ್ವಾಮೀಜಿ ಹೊಸಪೇಟೆಯ ಹಾಲಕೇರೆ ಮಠದ ಪೀಠಾಧಿಪತಿಗಳಾಗಿದ್ದಾರೆ. ಡಾ.ಚನ್ನಬಸವ ಸ್ವಾಮೀಜಿ 12 ವಚನ ಸಂಕಲನ, 10 ಕನವ ಸಂಕಲನ, 15 ವ್ಯಕ್ತಿ ಚರಿತ್ರೆ, 4 ಮಹಾಕಾವ್ಯಗಳು, ಅಭಿನವ ಸಿದ್ಧಬಸವೇಶ್ವರ ಅಂಕಿತದಲ್ಲಿ ಆಧುನಿಕ ವಚನಗಳು, ಸೇರಿದಂತೆ 70ಕ್ಕೂ ಹೆಚ್ಚು ವೈವಿದ್ಯಮಯ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ಕನ್ನಡ ಸಾಹಿತ್ಯ ಪರಿಷತ್, ಕನ್ನಡಸಂಘ ಸೇರಿದಂತೆ ಅನೇಕ ಸಂಘಟನೆಗಳು ಪ್ರಶಸ್ತಿನೀಡಿ ಗೌರವಿಸಿವೆ. ಇತ್ತೀಚೆಗೆ ತೇರದಾಳದಲ್ಲಿ ನಡೆದ ನೂತನ ಮಂದಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಭುಭೂಷಣ ಪ್ರಶಸ್ತಿಯು ಸಲ್ಲಿತ್ತು. ಆಧುನಿಕ ವಚನಕಾರರು, ಪ್ರಖರ ಚಿಂತಕರು, ಖ್ಯಾತ ಪ್ರವಚನಕಾರರು, ಪ್ರಕಾಂಡ ಪಂಡಿತರು ಮಮತಾಮಯಿ, ಮಾತೃ ಹೃದಯಿ, ಕವಿ, ಕಲಾವಿದರು, ಸಾಹಿತಿ ಎಂಬೆಲ್ಲ ಬಿರುದುಗಳು ಇವರಗಿವೆ. ಜಮಖಂಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟದಲ್ಲಿ ಶ್ರೀಗಳು ಪ್ರಮುಖ ಪಾತ್ರವಹಿಸಿದ್ದರು.
ಸಂತಾಪ: ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ, ಜಿ.ಎಸ್.ನ್ಯಾಮಗೌಡ, ಡಾ.ವಿಜಯಲಕ್ಷ್ಮೀತುಂಗಳ, ತೌಫಿಕ್ ಪಾರ್ಥನಳ್ಳಿ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡುರ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.