ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಶರಣಬಸವ ವಿವಿ ಕುಲಾಧಿಪತಿಗಳಾಗಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅಧಿಕಾರ ವಹಿಸಿಕೊಂಡರು. ಶತಮಾನೋತ್ಸವ ಆಚರಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿಯೂ ಕಾರ್ಯಭಾರ ವಹಿಸಿಕೊಂಡರು.ಶರಣಬಸವೇಶ್ವರ ದೇಗುಲದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ ನಡೆಯಿತು. ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸಂಘದ ಮೊದಲ ಮಹಿಳಾ ಅಧ್ಯಕ್ಷೆ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆ.14ರಂದು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರ ನಿಧನದ ನಂತರ ಎರಡೂ ಹುದ್ದೆಗಳು ಖಾಲಿಯಾಗಿದ್ದವು.ಅಧಿಕಾರ ಸ್ವೀಕಾರದ ನಂತರ ಭಾವುಕರಾಗಿ ಮಾತನಾಡಿದ ಡಾ. ಅವ್ವಾಜಿ, ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮಹಿಳೆಯರ ಶೈಕ್ಷಣಿಕ ಸಬಲೀಕರಣವನ್ನು ಒದಗಿಸುವ ಡಾ. ಅಪ್ಪಾಜಿ ಅವರ ಕನಸನ್ನು ತಮ್ಮ ಅಧಿಕಾರಾವಧಿಯಲ್ಲಿ ಹೊಸ ಹುರುಪಿನಿಂದ ಕಾರ್ಯಗತಗೊಳಿಸೋದಾಗಿ ಹೇಳಿದರು.
ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣಕ್ಕಾಗಿ ಡಾ. ಅಪ್ಪಾಜಿಯವರ ಕನಸನ್ನು ನನಸಾಗಿಸುವಲ್ಲಿ ಹಲವಾರು ಶಿಕ್ಷಕರ ಕೊಡುಗೆಗಳನ್ನು ಡಾ. ಅವ್ವಾಜಿ ಸ್ಮರಿಸಿದರು ಮತ್ತು ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಾಂಶುಪಾಲರಲ್ಲಿ ಒಬ್ಬರಾದ ಎನ್. ಎಸ್. ದೇವರಕಲ್ ಅವರ ಕೊಡುಗೆಯನ್ನು ಶ್ಲಾಘಿಸಿದರು.ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರನ್ನು “ವಿಶ್ವ ಮಾನವ”ರನ್ನಾಗಿಸುವುದು ಅವರ ಇನ್ನೊಂದು ಜವಾಬ್ದಾರಿಯಾಗಿದೆ ಎಂದು ಡಾ. ದಾಕ್ಷಾಯಿಣಿ ಘೋಷಿಸಿದರು. ಡಾ. ಅಪ್ಪಾಜಿ ಅವರ ಸ್ಮರಣಾರ್ಥ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಅನುಭವ ಮಂಟಪಕ್ಕೆ “ಡಾ. ಶರಣಬಸವಪ್ಪ ಅಪ್ಪಾಜಿ ಅನುಭವ ಮಂಟಪ” ಎಂದು ನಾಮಕರಣ ಮಾಡಲಾಯಿತು.
ಶರಣಬಸವ ವಿವಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ನೇತೃತ್ವದಲ್ಲಿ ಡಾ. ಅವ್ವಾಜಿ ಅವರನ್ನು ಅಭಿನಂದಿಸಲಾಯಿತು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು.ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಮಾತನಾಡಿ, ನಾವೆಲ್ಲರೂ ಡಾ. ಅವ್ವಾಜಿ ಅವರ ಕೈಗಳನ್ನು ಬಲಪಡಿಸಬೇಕೆಂದರು. ಡಾ. ಅಪ್ಪಾಜಿ ಪರಿವಾರದವರು, ನಿಷ್ಠಿ , ಸೋಲಾಪುರದ ಕಾಡಾದಿ, ಔಸಾ ಮಹಾರಾಜ್, ಭೀಮಳ್ಳಿ, ವಡಗಾಂವ್ ದೇಶಮುಖ್ ಪರಿವಾರದವರಿದ್ದರು. ವೀರಶೈವ ಸಮಾಜ ಮುಖಂಡರಾದ ಅರುಣ್‍ಕುಮಾರ್ ಪಾಟೀಲ್ ಕೊಡಲಹಂಗರಗಾ, ಶರಣಬಸವ ವಿವಿ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪ್ರೊ. ಕಿರಣ್ ಮಾಕಾ ಇದ್ದರು.