ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ರಾಷ್ಟ್ರಕವಿ ಕುವೆಂಪು ತಮ್ಮ ಸಾಹಿತ್ಯ, ಕವನ, ಸಂಗೀತ, ನಾಟಕ, ಕತೆ, ಕಾದಂಬರಿಗಳಲ್ಲಿ ಮನುಜ ಮತ ವಿಶ್ವಪಥ ಎಂದು ಸಾರುವ ಮೂಲಕ ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯತೆಯ ವಿರುದ್ಧ ಜಾಗೃತಿ ಸಂದೇಶಗಳನ್ನು ನೀಡುವ ಮೂಲಕ ವಿಶ್ವಮಾನವ ಸಂದೇಶ ನೀಡಿ ವಿಶ್ವ ಮಾನವ ಎನಿಸಿಕೊಂಡಿದ್ದಾರೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ ಹೇಳಿದರು.ಪಟ್ಟಣದ ವಿಕ್ರಂಪೂರ ಬಡಾವಣೆಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶುಕ್ರವಾರ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಜಯಂತಿ ಅಂಗವಾಗಿ ವಿಶ್ವಮಾನವ ದಿನಾಚರಣೆಯ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನಾಡು ನುಡಿ, ನೆಲ ಜಲ, ಕಲೆ ಸಂಸ್ಕೃತಿಯ ರಕ್ಷಣೆಗೆ ತಮ್ಮದೇ ಆದ ಶೈಲಿಯಲ್ಲಿ ಶ್ರೇಷ್ಠ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಅವರನ್ನ ನಾವೆಲ್ಲರೂ ಸಾಹಿತ್ಯದ ಮೇರು ಶಿಖರ ಎಂದು ಬಣ್ಣಿಸುತ್ತೇವೆ. ಅವರು ಹಾಕಿಕೊಟ್ಟ ಮಾರ್ಗದರ್ಶನ, ಕನ್ನಡ ಅಭಿಮಾನ, ತತ್ವ ಆದರ್ಶಗಳು ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ (ಎಚ್.ಶಿವರಾಮೇಗೌಡ ಬಣ) ತಾಲೂಕು ಘಟಕದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಮಾನವ ಸಂದೇಶ ಸಾರಿದ ಕನ್ನಡ ನಾಡಿನ ಹೆಮ್ಮೆಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ಚೇತನ ರಾಷ್ಟ್ರಕವಿ ಕುವೆಂಪು ಅವರು ತಮ್ಮ ಶ್ರೇಷ್ಠ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡಕ್ಕೆ ಅವರು ಸಲ್ಲಿಸಿದ ಸೇವೆ ಅಪಾರವಾದದ್ದು, ಅವರ ಸೇವೆ ಪ್ರತಿಯೊಬ್ಬರಿಗೆ ಮಾದರಿ ಎಂದು ತಿಳಿಸಿದರು.ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎ.ಚೌಗಲಾ ಮತ್ತು ಶಿಕ್ಷಕ ಎಸ್.ಎಸ್.ಮುಗಳಖೋಡ ಮಾತನಾಡಿ, ಕನ್ನಡದ ಅಸ್ಮಿತೆಯ ಜೊತೆಗೆ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ಶ್ರೇಷ್ಠ ಕವಿ ಕುವೆಂಪುರವರು. ತಮ್ಮ ಕವಿತೆ ಮತ್ತು ಚಿಂತನೆಗಳ ಮೂಲಕ ಕನ್ನಡ ನಾಡು-ನುಡಿಯ ಬಗ್ಗೆ ನಾಡಿನ ಜನರಲ್ಲಿ ಕನ್ನಡ ಅಭಿಮಾನ ಮೂಡಿಸಿದ ಅಗ್ರಮಾನ್ಯ ಕವಿಗಳಾಗಿದ್ದಾರೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಅಥಣಿ ತಾಲೂಕು ಚುಡುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಡಾ.ರಾಮಣ್ಣ ದೊಡ್ಡನಿಂಗಪ್ಪಗೋಳ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕರವೇ ಜಿಲ್ಲಾ ಸಂಚಾಲಕ ಜಗನ್ನಾಥ ಬಾಮನೆ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ ಮೈಗೂರ, ಕರವೇ ಮಹಿಳಾ ಘಟಕದ ಅಧ್ಯಕ್ಷ ವಿದ್ಯಾಮರಡಿ, ಕರವೇ ತಾಲೂಕು ಉಪಾಧ್ಯಕ್ಷ ಸಿದ್ದು ಹಂಡಗಿ, ಕಾರ್ಯದರ್ಶಿ ರಾಜು ವಾಘಮಾರೆ, ಶಿಕ್ಷಕಿಯರಾದ ವಿ.ಎಸ್.ವಾಘಮೋಡೆ, ಡಿ.ಎ.ಬರಡಗಿ, ಜಿ.ಎನ್.ಕುಂಬಾರ, ಆರ್.ವಿ.ಹಸರೆ, ಎಸ್.ವೈ.ಒಡೆಯರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಸ್.ಎ.ಚೌಗುಲಾ ಸ್ವಾಗತಿಸಿದರು. ವಿ.ಎಸ್.ವಾಘಮೋಡೆ ನಿರೂಪಿಸಿದರು. ರಾಜು ವಾಘಮಾರೆ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))