ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿನಂತೆ ದಾವಣಗೆರೆ ಹಾಗೂ ನೆರೆಹೊರೆಯ ಜಿಲ್ಲೆಗಳ ಬಡ, ಮಧ್ಯಮ ವರ್ಗ, ಗ್ರಾಮೀಣ ಭಾಗದ ಜನರ ಪಾಲಿಗೆ ಹಿರಿಯ ವೈದ್ಯರಾದ ಡಾ. ಎಸ್.ಎಂ.ಎಲಿ ಅವರು ಅಕ್ಷರಶಃ ದೇವರೇ ಆಗಿದ್ದಾರೆ. ಅಂತಹ ಹಿರಿಯ ವೈದ್ಯರ ನಿಸ್ವಾರ್ಥ ಸೇವೆಗೆ ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಈಗ ಲಭಿಸಿರುವುದು ಪ್ರಶಸ್ತಿ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.

- ಬಡ, ಮಧ್ಯಮ ವರ್ಗ, ಗ್ರಾಮೀಣರ ಪಾಲಿಗೆ ದೇವರೇ ಆಗಿರುವ 91ರ ಹರೆಯದ ಹಿರಿಯ ವೈದ್ಯ

- - -

ನಾಗರಾಜ ಎಸ್. ಬಡದಾ‍ಳ್

ಕನ್ನಡಪ್ರಭ ವಾರ್ತೆ ದಾವಣಗೆರೆ

ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿನಂತೆ ದಾವಣಗೆರೆ ಹಾಗೂ ನೆರೆಹೊರೆಯ ಜಿಲ್ಲೆಗಳ ಬಡ, ಮಧ್ಯಮ ವರ್ಗ, ಗ್ರಾಮೀಣ ಭಾಗದ ಜನರ ಪಾಲಿಗೆ ಹಿರಿಯ ವೈದ್ಯರಾದ ಡಾ. ಎಸ್.ಎಂ.ಎಲಿ ಅವರು ಅಕ್ಷರಶಃ ದೇವರೇ ಆಗಿದ್ದಾರೆ. ಅಂತಹ ಹಿರಿಯ ವೈದ್ಯರ ನಿಸ್ವಾರ್ಥ ಸೇವೆಗೆ ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಈಗ ಲಭಿಸಿರುವುದು ಪ್ರಶಸ್ತಿ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.

ಕೆಲವೇ ಗಂಟೆ ರೋಗಿಗಳ ತಪಾಸಣೆ ಮಾಡಿ ಸಾವಿರಾರು ರು. ಹಣ ಗಳಿಸುವ ವೈದ್ಯಕೀಯ ವೃತ್ತಿಯೇ ಕಾಸು ಮಾಡುವ ದಂಧೆಯಾದ ಕಾಲಘಟ್ಟವಿದು. ಇಂಥ ಕಾಲದಲ್ಲಿ ನಿತ್ಯ ಬೆಳಗ್ಗೆ 8ರಿಂದ ರಾತ್ರಿ 11ರವರೆಗೆ ಇಂದಿಗೂ ನಿರಂತರ ಕಡುಬಡವರು, ಗ್ರಾಮೀಣರು, ಅಸಹಾಯಕರು, ದೀನ ದಲಿತರ ಆರೈಕೆಯಲ್ಲಿ ತೊಡಗಿರುವ ದಾವಣಗೆರೆಯ ಹಿರಿಯ ವೈದ್ಯ ಡಾ.ಸಿದ್ಧಲಿಂಗಪ್ಪ ಮುರಿಗೆಪ್ಪ ಎಲಿ ಅವರುವೈದ್ಯ ಸೇವೆಗೊಂದು ಆದರ್ಶ, ಉತ್ತಮ ಅರ್ಥ ತಂದುಕೊಡುವಂತೆ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.

ತಮ್ಮ ಹೆಸರಿಗೆ ತಕ್ಕಂತೆ ಹಿರಿಯ ವೈದ್ಯ ಡಾ. ಎಸ್.ಎಂ. ಎಲಿ ಎಲೆಮರೆಯ ಕಾಯಿಯಂತೆ ಇರುವವರು. ವಿಶ್ರಾಂತ ಜೀವನದ ವಯಸ್ಸಿನಲ್ಲಿ ದಣಿವರಿಯದೇ ಬಡರೋಗಿಗಳ ಆರೈಕೆಯಲ್ಲಿ ತೊಡಗಿ, ಯುವ ವೈದ್ಯರಿಗೆ ಪ್ರೇರಣೆಯಾಗಿದ್ದಾರೆ. ಅಷ್ಟೇ ಅಲ್ಲ, ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲೂ ಡಾ.ಎಲಿ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಎಲಿ ಬಳಿ ವೈದ್ಯಕೀಯ ಶಿಕ್ಷಣ ಪಡೆದವರು ದೇಶ, ವಿದೇಶಗಳಲ್ಲಿ ಸೇವೆ ಸಲ್ಲಿಸಿ, ವಿಶ್ರಾಂತ ಜೀವನ ನಡೆಸುತ್ತಿದ್ದರೂ ಎಲಿ ಡಾಕ್ಟ್ರು ಮಾತ್ರ ಮುಪ್ಪಿಲ್ಲದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

91 ವರ್ಷದ ಹಿರಿಯ:

ಮೂಲತಃ ಧಾರವಾಡ ಜಿಲ್ಲೆಯ ಹಂಸಬಾವಿ ಗ್ರಾಮದ ಮುರಿಗೆಪ್ಪ ಎಲಿ, ಶಾಂತಮ್ಮ ದಂಪತಿ ಪುತ್ರನಾಗಿ ಡಾ. ಎಸ್.ಎಂ.ಎಲಿ 15.5.1935ರಲ್ಲಿ ಜನಿಸಿದವರು. 91ನೇ ಇಳಿ ವಯಸ್ಸಿನಲ್ಲೂ ಯುವಕರೂ ನಾಚುವಂತೆ ವೈದ್ಯ ವೃತ್ತಿ, ಸಮಾಜಮುಖಿ ಕಾರ್ಯ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಡಾ.ಎಲಿ ನಿರಂತರ ಎಲೆಯಾಗಿದ್ದುಕೊಂಡೇ, ಹೂವುಗಳು ಅರಳಲು ಕಾರಣರಾದವರು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣವನ್ನು ದುರ್ಗದ ಹೈಸ್ಕೂಲ್, ಹಂಸಭಾವಿಯಲ್ಲಿ ಮುಗಿಸಿ, ಇಂಟರ್ ಮೀಡಿಯಟ್ ಶಿಕ್ಷಣವನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪೂರ್ಣಗೊಳಿಸಿದವರು.

ಎಂಬಿಬಿಎಸ್ ಪದವಿಯನ್ನು 1962ರಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ಪಡೆದರು. 1968ರಲ್ಲಿ ಎಂಡಿ (ಜನರಲ್ ಮೆಡಿಸನ್) ಪದವಿಯನ್ನು ಮುಂಬೈನ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪೂರ್ಣಗೊಳಿಸಿದರು. ಅದೇ ಆಸ್ಪತ್ರೆಯಲ್ಲಿ 3 ವರ್ಷ ಸೇವೆ ಸಲ್ಲಿಸಿ, 1968ರಲ್ಲಿ ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಮೆಡಿಸನ್ ವಿಭಾಗದ ಬೋಧಕರಾಗಿ ಸೇವೆ ಆರಂಭಿಸಿದವರು ಡಾ.ಎಲಿ.

ಸರಳತೆ, ಸಜ್ಜನಿಕೆ, ಪಾರದರ್ಶಕತೆ, ಕಾರ್ಯದಕ್ಷತೆ, ವೃತ್ತಿಪರತೆ, ಪ್ರಾಮಾಣಿಕತೆ, ಸೇವಾ ಮನೋಭಾವವು ಹಂತ ಹಂತವಾಗಿ ಬಡ್ತಿ ಪಡೆದ ಡಾ.ಎಲಿ ಸಂಸ್ಥೆಯ ಅವಿಭಾಜ್ಯ ಅಂಗವಾದವರು. ಡಾ.ಎಲಿ ಅವರ ಸೇವೆ ಗುರುತಿಸಿದ ಬಾಪೂಜಿ ವಿದ್ಯಾಸಂಸ್ಥೆ ನಿವೃತ್ತಿ ನಂತರವೂ 2 ವರ್ಷ ಸೇವೆ ವಿಸ್ತರಿಸುವ ಮೂಲಕ ಸಾಧಕನ ಸೇವೆಗೆ ಅವಕಾಶ ಮಾಡಿಕೊಟ್ಟಿತ್ತು. ತಮ್ಮ ಸೇವಾ ಕಾಯಕದ ಬಗ್ಗೆ ಎಂದಿಗೂ ಪ್ರಚಾರ ಬಯಸದ, ಯಾರ ನೆರವನ್ನೂ ಯಾಚಿಸದ ಡಾ.ಎಲಿ ಇಂದಿನ ವೈದ್ಯರಿಗೆ ಪ್ರೇರಣೆಯಾಗಿದ್ದಾರೆ.

ಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುವ ಜನ:

ನಿವೃತ್ತಿ ನಂತರವೂ ಡಾ. ಎಸ್.ಎಂ. ಎಲಿ ವೈದ್ಯಕೀಯ ಸೇವೆ ಅವಿರತವಾಗಿ ಸಾಗುತ್ತಿದೆ. ಯಾರೇ ಡಾ.ಎಲಿ ಕ್ಲಿನಿಕ್‌ಗೆ ಹೋದರೂ ಗ್ರಾಮೀಣರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗದವರು, ಕಡುಬಡವರು ಅಲ್ಲಿ ಸಾಲುಗಟ್ಟಿ ನಿಂತಿರುತ್ತಾರೆ. ಕಿರಿಯರಿಂದ ಹಿರಿಯವರೆಗೆ, ಬಡವ-ಬಲ್ಲಿದ ಎನ್ನದೇ, ಎಲ್ಲರಿಗೂ ಅಚ್ಚುಮೆಚ್ಚಿನ ಎಲಿ ಡಾಕ್ಟ್ರು ಆಗಿ ಸೇವೆ ನೀಡುತ್ತಾರೆ. ನಿತ್ಯವೂ ಬೆಳಗ್ಗೆ 8 ರಿಂದ ರಾತ್ರಿ 11 ಗಂಟೆವರೆಗೆ ಕಟ್ಟಕಡೆಯ ರೋಗಿಯನ್ನೂ ಉಪಚರಿಸುತ್ತಾರೆ. ತಮಗೆ ಬಂದ ಸ್ಯಾಂಪಲ್ ಮೆಡಿಸನ್ ಸಹ ಬಡ ರೋಗಿಗಳಿಗೆ ಹಂಚುವ, ಆಟೋಗೆ ದುಡ್ಡಿಲ್ಲದವರಿಗೆ ಕಾಸು ಕೊಟ್ಟು ಕಳಿಸುವ ಹೃದಯ ವೈಶಾಲ್ಯದ ವೈದ್ಯ ಡಾ.ಎಲಿ ಆಗಿದ್ದಾರೆ.

7 ದಶಕಗಳಿಂದ ಜನಸೇವೆ:

ಬಡವರ ವೈದ್ಯರೆಂದೇ 7 ದಶಕದಿಂದಲೂ ಗುರುತಿಸಲ್ಪಡುವ ಡಾ. ಎಸ್.ಎಂ.ಎಲಿ ಇಂದಿಗೂ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಹೊಸಪೇಟೆ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಚಿಕಿತ್ಸೆ ಬಯಸಿ ಅಲ್ಲಿಂದ ರೋಗಿಗಳು ಇವರಲ್ಲೇ ಬರುತ್ತಾರೆ. 2-3 ತಲೆಮಾರಿನ ಜನರಿಗೆ ಚಿಕಿತ್ಸೆ ನೀಡಿದ ಶ್ರೇಯ ಡಾ.ಎಲಿಯವರದ್ದು. ನೋಡ ನೋಡುತ್ತಿದ್ದಂತೆ ರೋಗ ಪತ್ತೆ ಮಾಡುವ, ಕಣ್ಣು, ನಾಲಿಗೆ, ನಡೆಯುವ ವಿಧಾನದಲ್ಲೇ ರೋಗ ಗುರುತಿಸುವಲ್ಲಿ ಡಾ. ಎಸ್.ಎಂ. ಎಲಿ ಸಿದ್ಧಹಸ್ತರು. ತಮ್ಮ 91ನೇ ವಯಸ್ಸಿನಲ್ಲಿ ಕ್ಲಿನಿಕ್ ಮುಂದೆ ಬೆಳಗ್ಗೆ ತಡರಾತ್ರಿವರೆಗೂ ಸೇರುವ ಜನಜಾತ್ರೆ ನೋಡಿ ಡಾ.ಎಲಿ ಎಂದಿಗೂ ಮೂಗು ಮುರಿದವರಲ್ಲ. ಎಲಿ ಡಾಕ್ಟ್ರೇ ತಮ್ಮನ್ನು ನೋಡಿ, ಚಿಕಿತ್ಸೆ ಕೊಟ್ಟರೆ ಗುಣಮುಖರಾಗುತ್ತೇವೆಂಬ ಬಲವಾದ ನಂಬಿಕೆ ಜನರಲ್ಲಿ ಬೇರೂರಿದೆ. ಅದಕ್ಕೆ ಚ್ಯುತಿ ಬಾರದಂತೆ ವೈದ್ಯರು ಸೇವೆಯಲ್ಲಿ ತೊಡಗಿದ್ದಾರೆ.

ದಿನವಿಡೀ ರೋಗಿಗಳ ಆರೈಕೆಯಲ್ಲಿ ತೊಡಗುವ ಡಾ. ಎಸ್.ಎಂ.ಎಲಿ ಸೇವೆಗೆ ಪತ್ನಿ ನಾಗರತ್ನಮ್ಮ ಎಂದಿಗೂ ಬೆನ್ನೆಲುಬಾಗಿ ಪ್ರೋತ್ಸಾಹಿಸಿದವರು. ಇನ್ನು ಡಾ. ಎಲಿ ಅವರ ಮಕ್ಕಳಾದ ಡಾ.ವಿನಯ್ ಎಸ್. ಎಲಿ ಎಂಡಿ ಆಗಿದ್ದರೆ, ಡಾ.ಸುಮನ್ ಎಸ್.ಎಲಿ ಇಎನ್‌ಟಿ ತಜ್ಞರು. ತಂದೆ ತೋರಿದ, ಹಾಕಿ ಕೊಟ್ಟ ಮಾರ್ಗದಲ್ಲಿಯೇ ಸಾಗುತ್ತಾ, ಭವಿಷ್ಯದಲ್ಲಿ ತಂದೆ ತೋರಿದ ಹಾದಿಯಲ್ಲಿ ಸಾಗುವ ಮಕ್ಕಳೆಂಬುದನ್ನು ತೋರಿಸಿ ಕೊಟ್ಟಿದ್ದಾರೆ.

- - -

(ಬಾಕ್ಸ್‌-1)

ಸಾಧಕರ ಹೆಸರು: ಡಾ. ಎಸ್.ಎಂ.ಎಲಿ (ಎಲಿ ಡಾಕ್ಟ್ರು)

ಎಂಡಿ (ಜನರಲ್ ಮೆಡಿಸನ್)

ವಿಳಾಸ: ಡಾ.ಎಸ್.ಎಂ.ಎಲಿ, 2717, 2ನೇ ಮುಖ್ಯ ರಸ್ತೆ, ಎಂ.ಸಿ. ಕಾಲನಿ ಬಿ ಬ್ಲಾಕ್, ದಾವಣಗೆರೆ.

ಮೊಬೈಲ್‌: ಬಳಸಲ್ಲ

ಸಾಧನೆಯ ಕ್ಷೇತ್ರ: ವೈದ್ಯಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರ.

ಸಾಧನೆಯ ಅವಧಿ: 1968ರಿಂದ ಈ ಕ್ಷಣದವರೆಗೂ ವೈದ್ಯಸೇವೆ.

- - -

- (ಫೋಟೋಗಳಿವೆ)