ಡಾ. ಜಿ.ಎಲ್. ಹೆಗಡೆಗೆ ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿ ಪ್ರದಾನ

| Published : Sep 01 2024, 01:46 AM IST

ಸಾರಾಂಶ

ಆರಾಧನೆ ಕಲೆಯಾಗಿರುವ ಯಕ್ಷಗಾನ ಎಂದರೆ ಕುಣಿಯುವುದು ಎಂಬಂತಾಗಿದೆ. ಆದರೆ ಅದು ತಪ್ಪು. ಜನರಿಗೆ ಉತ್ತಮ ಸಂದೇಶ ನೀಡುವುದು ಯಕ್ಷಗಾನ ಮುಖ್ಯ ಉದ್ದೇಶವಾಗಿದೆ.

ಶಿರಸಿ: ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅವರಿಗೆ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರದಾನ ಮಾಡಿದರು.

ಶನಿವಾರ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಭವನದಲ್ಲಿ ಯಕ್ಷ ಶಾಲ್ಮಲಾ ಹಾಗೂ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಆಶ್ರಯದಲ್ಲಿ ಹಮ್ಮಿಕೊಂಡ ೨೦ನೇ ವರ್ಷದ ಯಕ್ಷೋತ್ಸವದ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಡಾ. ಜಿ.ಎಲ್. ಹೆಗಡೆ ಕುಮಟಾ ಮಾತನಾಡಿ, ಆರಾಧನೆ ಕಲೆಯಾಗಿರುವ ಯಕ್ಷಗಾನ ಎಂದರೆ ಕುಣಿಯುವುದು ಎಂಬಂತಾಗಿದೆ. ಆದರೆ ಅದು ತಪ್ಪು. ಜನರಿಗೆ ಉತ್ತಮ ಸಂದೇಶ ನೀಡುವುದು ಯಕ್ಷಗಾನ ಮುಖ್ಯ ಉದ್ದೇಶವಾಗಿದೆ. ಯಕ್ಷಗಾನ ಅಕಾಡೆಮಿಯನ್ನು ಇನ್ನಷ್ಟು ಭದ್ರಗೊಳಿಸಿರುವುದರಿಂದ ಯಕ್ಷಗಾನ ಕಲೆ ಉಳಿಯಲು ಸಾಧ್ಯ ಎಂದರು.

ಯಕ್ಷಗಾನ ಹವ್ಯಕರ ಪರಂಪರೆಯಾಗಿದ್ದು, ಅದನ್ನು ನಾನು ಸಂಶೋಧನಾ ಪ್ರಬಂಧದಲ್ಲಿ ಮಂಡಿಸಿದ್ದೇನೆ. ತಾಳಮದ್ದಳೆಯನ್ನು ಉಳಿಸಿಕೊಳ್ಳುವ ಬಹುಜವಾಬ್ದಾರಿ ಇದೆ ಎಂದರು.

ನಮ್ಮ ನಡುವೆ ಸ್ನೇಹ, ಪ್ರೀತಿ, ವಿಶ್ವಾಸವಿರಬೇಕು. ಪ್ರಶಸ್ತಿಯನ್ನು ನಾನು ಅಪೇಕ್ಷ ಪಟ್ಟಿಲ್ಲ. ಎಂ.ಎ. ಹೆಗಡೆ ಅವರದ್ದು ನನ್ನದು ದೀರ್ಘ ಕಾಲದ ಸಂಬಂಧ ಎಂದರು.

ಯಲ್ಲಾಪುರದ ವಿಶ್ವ ದರ್ಶನ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಯಕ್ಷಗಾನಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಿಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸ್ಥೆಯೊಂದು ಯಕ್ಷಗಾನ ಕಲಾವಿದರಿಗೆ ಮಾಸಾಶನ, ಆರ್ಥಿಕ ಸಹಾಯ ಮಾಡುತ್ತಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಲಾವಿದರಿಗೂ ಸಿಗಬೇಕು ಎಂದರು.

ಸಮಾಜ ಸಂಘಟಿಸಿ, ಜಾಗೃತಿಗೊಳಿಸುವ ಶಕ್ತಿ ಯಕ್ಷಗಾನ ಕಲೆಗಿದೆ. ಮನಸ್ಸು, ಬುದ್ಧಿ, ಶರೀರಕ್ಕೆ ಚೈತನ್ಯ ನೀಡುವ ಶಕ್ತಿ ಯಕ್ಷಗಾನ ಕಲೆಗಿದೆ. ಸಂಸ್ಕೃತಿ ದೃಷ್ಟಿಯಿಂದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಸರ್ವಜ್ಞೇಂದ್ರ ಪ್ರತಿಷ್ಠಾನ ಕಾರ್ಯಾಧ್ಯಕ್ಷ ನಾರಾಯಣ ಭಟ್ಟ ಬಳ್ಳಿ ಉಪಸ್ಥಿತರಿದ್ದರು. ಯಕ್ಷ ಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಸ್ವಾಗತಿಸಿದರು. ವಿ. ಶಂಕರ ಭಟ್ಟ ಪ್ರಶಸ್ತಿ ಪತ್ರ ವಾಚಿಸಿದರು.

ಜಿ.ಜಿ. ಹೆಗಡೆ ಕನೇನಳ್ಳಿ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪ ಉಭಯ ಶ್ರೀಗಳಿಗೆ ಫಲ ಸಮರ್ಪಿಸಿದರು. ರಾಜರಾಜೇಶ್ವರಿ ಸಂಸ್ಕೃತ ಪಾಠ ಶಾಲಾ ವಿದ್ಯಾರ್ಥಿಗಳು ವೇದಘೋಷ ಹಾಡಿದರು. ಪ್ರವೀಣ ಹೆಗಡೆ ಮಣ್ಮನೆ ಕಾರ್ಯಕ್ರಮ ನಿರೂಪಿಸಿದರು.