ಡಾ. ಅಂಜಲಿ ವಿರುದ್ಧ ದ್ವೇಷದ ಭಾಷಣ ಸರಿಯಲ್ಲ: ಆರ್‌ವಿಡಿ

| Published : May 02 2024, 12:18 AM IST

ಸಾರಾಂಶ

ಯಾರನ್ನೇ ಆದರೂ ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಕಾರವಾರ: ಬಿಜೆಪಿಯವರು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ದ್ವೇಷದ ಭಾಷಣ ಮಾಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಅಸಮಾಧಾನ ಹೊರಹಾಕಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೊನ್ನಾವರದ ಪರೇಶ ಮೇಸ್ತಾ ಅವರ ಸಾವಿನ ಪ್ರಕರಣ ನಡೆದಾಗ ಡಾ. ಅಂಜಲಿ ನಿಂಬಾಳ್ಕರ್ ಅವರ ಪತಿ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್‌ ಅವರು ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದರು ಎಂದಿದ್ದಾರೆ. ಯಾರನ್ನೇ ಆದರೂ ವೈಯಕ್ತಿಕವಾಗಿ ನಿಂದಿಸುವುದು ಸರಿಯಲ್ಲ. ಈ ರೀತಿ ಹೇಳಿದ ಕಾಗೇರಿ ಅಂದು ಪ್ರತಿಭಟಿಸದೇ ಏಕೆ ಓಡಿ ಹೋಗಿದ್ದು? ಅವರದ್ದೇ ಸರ್ಕಾರ ಕೂಡಾ ಅಧಿಕಾರದಲ್ಲಿತ್ತು. ಆದರೂ ಏಕೆ ಕ್ರಮ ಕೈಗೊಂಡಿಲ್ಲ. ಈಗ ಮತಗಳಿಗಾಗಿ ಈ ಮಟ್ಟಕ್ಕೆ ಇಳಿದಿರುವುದು ಖಂಡನೀಯ ಎಂದರು.

ಜಿಲ್ಲೆಯಲ್ಲಿ ನಿರುದ್ಯೋಗ, ಕೈಗಾರಿಕೆ, ಮೀನುಗಾರಿಕೆ, ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು, ಅರಣ್ಯ ಅತಿಕ್ರಮಣದಂಥ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಪ್ರಧಾನಮಂತ್ರಿಯವರು ಶಿರಸಿಗೆ ಬಂದಾಗ ಮಾತನಾಡುತ್ತಾರೆ ಎಂದು ಜನರು ತಿಳಿದುಕೊಂಡಿದ್ದರು. ಆದರೆ ವೇದಿಕೆಯ ಮೇಲಿದ್ದ ಯಾರೊಬ್ಬರೂ ಈ ಬಗ್ಗೆ ಮಾತನಾಡದಿರುವುದು ಖೇದಕರ ಸಂಗತಿಯಾಗಿದೆ ಎಂದು ಅಭಿಪ್ರಾಯಿಸಿದರು.

ಕಾಂಗೆಸ್‌ನ ಜಿಲ್ಲಾ ವಕ್ತಾರ ಶಂಭು ಶೆಟ್ಟಿ, ರಾಘು ನಾಯ್ಕ, ಬಾಬು ಶೇಖ್, ವಿಠ್ಠಲ ಸಾವಂತ, ಸತೀಶ ಬೇಳೂರಕರ, ಫಕ್ಕೀರಪ್ಪ ಭಂಡಾರಿ ಇದ್ದರು.