ಸಾರಾಂಶ
ಸರ್ಕಾರ ನಮ್ಮದಿರಲಿ, ಯಾರದ್ದೇ ಇರಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಅಭಿಪ್ರಾಯ ಹೇಳುವುದು, ಸಮಾವೇಶ ನಡೆಸುವುದು ಮತ್ತು ಆರೋಗ್ಯಕರವಾಗಿ ಪ್ರತಿರೋಧ ವ್ಯಕ್ತಪಡಿಸುವುದು ಸಂವಿಧಾನ ನಮಗೆ ನೀಡಿದ ಹಕ್ಕಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅಸ್ಸಾಂ ಮಾರ್ಗವಾಗಿ ಚಲಿಸುತ್ತಿರುವ ಭಾರತ ಐಕ್ಯತಾ ಯಾತ್ರೆಗೆ ಬೆದರಿ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಿರುವ ಬಿಜೆಪಿಗರು, ಕೆಲವೆಡೆ ದೇವಸ್ಥಾನ ಪ್ರವೇಶಕ್ಕೆ ತಡೆ ಒಡ್ಡಿದರೆ ಇನ್ನೊಂದು ಕಡೆ ಸುಖಾ ಸುಮ್ಮನೇ ಎಫ್ಐಆರ್ದಾಖಲಿಸಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೊದಲ ಅವಧಿಯ ಭಾರತ ಐಕ್ಯತಾ ಯಾತ್ರೆಯು ತಾವುದೇ ತೊಂದರೆ ಇಲ್ಲದೇ ಮುಗಿದಿದ್ದಾಗಲೂ ಕೂಡಾ ಯಾತ್ರೆಯಲ್ಲಿ ಹಿಂಸೆಗೆ ಪ್ರಚೋದನೆ ನೀಡಲಾಗಿದೆ ಎನ್ನುವ ಅಸ್ಸಾಂ ಮುಖ್ಯಮಂತ್ರಿಗಳ ಹೇಳಿಕೆಯು ಅತ್ಯಂತ ಬಾಲಿಷತನದಿಂದ ಕೂಡಿದೆ. ಸರ್ಕಾರ ನಮ್ಮದಿರಲಿ, ಯಾರದ್ದೇ ಇರಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಅಭಿಪ್ರಾಯ ಹೇಳುವುದು, ಸಮಾವೇಶ ನಡೆಸುವುದು ಮತ್ತು ಆರೋಗ್ಯಕರವಾಗಿ ಪ್ರತಿರೋಧ ವ್ಯಕ್ತಪಡಿಸುವುದು ಸಂವಿಧಾನ ನಮಗೆ ನೀಡಿದ ಹಕ್ಕಾಗಿದೆ.
ಆದರೆ ದೇವರು ಧರ್ಮವನ್ನು ಮುಂದಿಟ್ಟುಕೊಂಡು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಬಿಜೆಪಿಗರ ಈ ನಡೆಯನ್ನು ಒಪ್ಪಲು ಸಾಧ್ಯವಿಲ್ಲ.ಈ ಹಿನ್ನೆಲೆ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗೆ ಆಡಳಿತ ನಡೆಸುತ್ತಿರುವ ಪ್ರಧಾನಿಗಳು ಮತ್ತು ಗೃಹ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ ಭಾರತ ಐಕ್ಯತಾ ಯಾತ್ರೆಯು ಸುಗಮವಾಗಿ ಜರುಗಲು ಅವಕಾಶ ಮಾಡಿಕೊಡಬೇಕು ಮತ್ತು ಈ ಯಾತ್ರೆಗೆ ಅಗತ್ಯ ರಕ್ಷಣೆ ಒದಗಿಸಬೇಕು ಅವರು ಆಗ್ರಹಿಸಿದ್ದಾರೆ.