ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ ಗೌರಿಬಿದನೂರು
ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ಸನ್ನು 1200 ಎಕರೆ ಪ್ರದೇಶದಲ್ಲಿ ಪಾಶ್ಚಾತ್ಯ ಮಾದರಿಯಲ್ಲಿ ಅತ್ಯುನ್ನತವಾಗಿ ನಿರ್ಮಿಸಲು ಕಾರಣಕರ್ತರಾದವರು ಶಿಕ್ಷಣ ತಜ್ಞ ಡಾ. ಎಚ್ ನರಸಿಂಹಯ್ಯ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ತಿಳಿಸಿದರು.ಶಿಕ್ಷಣ ತಜ್ಞ, ಗಾಂಧಿವಾದಿ ಪದ್ಮಭೂಷಣ ಡಾ.ಹೆಚ್.ನರಸಿಂಹಯ್ಯ ನವರ ಹುಟ್ಟೂರು ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಹೊಸೂರು ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಹೆಚ್.ಎನ್ ಅವರ ಜನ್ಮ ಶತಾಬ್ದಿ ಹಾಗೂ ಅವರು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಡಾ.ಎಚ್ಚೆನ್ ಅಭಿವೃದ್ಧಿ ಪ್ರಾಧಿಕಾರಡಾ.ಹೆಚ್.ಎನ್.ಅವರ ಹುಟ್ಟೂರು ಹೊಸೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಆರಂಭಿಸುವ ಜೊತೆಗೆ ಡಾ.ಹೆಚ್.ಎನ್. ಹೆಸರಿನ ಕಲಾಭವನ, ರಾಷ್ಟ್ರೀಯ ವಿಜ್ಞಾನ ಪಾರ್ಕ್, ಅಮರಧಾಮ ಮತ್ತು ಅವರು ಓದಿದ ಶಾಲೆಗಳನ್ನು ಒಟ್ಟಿಗೆ ಸೇರಿಸಿ ಡಾ.ಎಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಅದರ ಮೂಲಕ ಈ ಎಲ್ಲಾ ಸಂಸ್ಥೆಗಳನ್ನು ವ್ತವಸ್ಥಿತವಾಗಿ ನಿರ್ವಹಿಸುವ ಬಗ್ಗೆ ಮನವಿ ಬಂದಿದೆ ಎಂದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಬಗ್ಗೆ ಜನತೆಗೆ ಹೆಚ್ಚು ಒಲವಿದೆ. ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಪದ್ದತಿಯಲ್ಲಿ ಒಂದು ಆವರಣದಲ್ಲಿ ಎಲ್ ಕೆಜಿಯಿಂದ ಪದವಿ ಪೂರ್ವ ಹಂತದ ವರೆಗೂ ಶಿಕ್ಷಣ ನೀಡುವ ಈ ಶಾಲೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ 2 ಸಾವಿರ ಕೋಟಿ ರುಪಾಯಿ ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಸರ್ಕಾರವೂ 500 ಕೋಟಿಗಳನ್ನು ವೆಚ್ಚ ಮಾಡಲು ನಿರ್ಧರಿಸಿದೆ. ಒಟ್ಟು 2500 ಕೋಟಿ ರೂಪಾಯಿ ಅನುದಾನದಲ್ಲಿ ರಾಜ್ಯದಲ್ಲಿ ಹೊಸ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ಬದ್ಧವಾಗಿದೆ ಎಂದರು.ಮೌಢ್ಯ ಆಚರಣೆ ವಿರೋಧಿ
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ವಿಜ್ಞಾನ ಮತ್ತು ವೈಚಾರಿಕತೆಯನ್ನು ಬಲವಾಗಿ ನಂಬಿದ್ದ ಡಾ.ಎಚ್ಎನ್ ಅವರು ಮೌಢ್ಯ ಆಚರಣೆಯನ್ನು ಬಲವಾಗಿ ವಿರೋಧಿಸುತ್ತಿದ್ದರು. ಶಾಲಾ ಕಾಲೇಜುಗಳೇ ನಿಜವಾದ ದೇವಸ್ಥಾನ,ಚರ್ಚು,ಮಸೀದಿಗಳು ಎಂದು ಪ್ರತಿಪಾದಿಸುತ್ತಿದ್ದ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡಗೆ ನೀಡಿರುವ ಮೇರು ವ್ಯಕ್ತಿ. ವಿಧಾನ ಪರಿಷತ್ ಸದಸ್ಯರಾಗಿ, ಉಪಕುಲಪತಿಗಳಾಗಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರು ಸಹ ಅವರು ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಿದರು ಎಂದರು.ಅವರು ತಮ್ಮ ಜೀವಿತದ ಬಹುಕಾಲದ ಅವಧಿಯನ್ನು ವಿದ್ಯಾರ್ಥಿನಿಲಯಗಳಲ್ಲಿಯೇ ಸವೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಸರಳ ಜೀವನಕ್ಕೆ ಹೆಸರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಎಚ್ ಎನ್ ರವರು ರಾಜ್ಯಕ್ಕೆ ಮತ್ತು ದೇಶಕ್ಕೆ ಅಪಾರ ಕೊಡಗೆ ನೀಡಿರುವ ಧ್ರುವತಾರೆಗಳು ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು.
ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಪ್ರಶ್ನೆ ಮಾಡದೆ ಏನನ್ನು ನಂಬಬೇಡ ಮೌಡ್ಯ, ಜಾತಿ ಪದ್ಧತಿಗಳನ್ನು ನಂಬದೇ ವೈಚಾರಿಕ ಜೀವನ ನಡೆಸಬೇಕು ಎಂದು ಎಲ್ಲರಿಗೂ ತಿಳಿಸಿಕೊಟ್ಟ ಶ್ರೇಷ್ಠ ಸಮಾಜ ಸುಧಾರಕ ಎಚ್ ನರಸಿಂಹಯ್ಯ ಎಂದು ಬಣ್ಣಿಸಿದರು. ಕಾರ್ಯಕ್ರಮಕ್ಕೂ ಮುನ್ನ ಹೊಸೂರು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಎಚ್.ನರಸಿಂಹಯ್ಯ ಅವರ ಭಾವಚಿತ್ರಗಳೊಂದಿಗೆ ಬೃಹತ್ ಮೆರವಣಿಗೆಯನ್ನು ನಡೆಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ ಟಿ ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ, ಹೊಸೂರು ಗ್ರಾಪಂ ಅಧ್ಯಕ್ಷೆ ಗೀತಾ ನಾಗರಾಜ್, ನೆಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ, ನ್ಯಾಷನಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳು,ಹಾಲಿ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಎಚ್ ಎನ್ ಅಭಿಮಾನಿಗಳು, ಹಾಗೂ ಸಾರ್ವಜನಿಕರು ಇದ್ದರು.
ಬಾಕ್ಸ್.......................ಮುಖ್ಯಮಂತ್ರಿ ಗೈರು
ಗೌರಿಬಿದನೂರು: ಡಾ.ಹೆಚ್.ಎನ್ ಅವರ ಜನ್ಮ ಶತಾಬ್ದಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಜರಾಗಬೇಕಿತ್ತು. ಕೊನೆ ಕ್ಷಣದಲಿ ಅವರ ಮೊಳಕಾಳಿನಲ್ಲಿ ನೋವು ಕಾಣಿಸಿಕೊಂಡಿದ್ದು ತಕ್ಷಣ ಮಣಿಪಾಲ್ ಅಸ್ಪತ್ರೆಗೆ ಕೆದೊಯ್ದು ಪರೀಕ್ಷಿಸಿದಾಗ 2 ದಿನಗಳ ಕಾಲ ವಿಶಾರಂತಿ ತೆಗೆದುಕೊಳ್ಳಬೇಕಾಗಿ ವೈದ್ಯರು ತಿಳಿಸಿರುತ್ತಾರೆ. ಆದ ಕಾರಣ ಇನ್ನು2 ದಿನಗಳ ಕಾಲ ಸಿ,ಎಂ. ರವರ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಎಂ.ಸಿ.ಸುಧಾಕರ್ ತಿಳಿಸಿದರು. ಡಾ.ಕೆ.ಸುಧಾಕರ್ ರವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ತಪ್ಪು ಮಾಡಿದ್ದಾರಾ ಎಂಬ ಪ್ರಶ್ನೆಗೆ, ಉತ್ತರಿಸಿದ ಸಚಿವ ಸುಧಾಕರ್ ರಾಜಕಾರಣದಲ್ಲಿ ಹಲವಾರು ಸಂದರ್ಭಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಹಿಂದೆ ಅವರು ಕಾಂಗ್ರೆಸ್ ತೊರೆಯುವಾಗ ಪಕ್ಷದ ಹಿರಿಯರು ಬುದ್ಧಿ ಹೇಳಿದ್ದರು. ಬಹುಶಃ ಈಗ ಬಿಜೆಪಿಯಲ್ಲಿ ಅವರ ಮಾತಿಗೆ ಬೆಲೆಇಲ್ಲದಿದ್ದಾಗ ಹಳೆಯ ನೆನಪುಗಳನ್ನು ಹೊರಹಾಕಿದ್ದಾರೆ. ಈಗ ಅವರು ಸಂಸದರಾಗಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ಬದಲಾವಣೆಯ ಮಾತಿಲ್ಲ ಎಂದು ತಿಳಿಸಿದರು.