ಜೆ.ಪಿ.ನಗರ ಮೆಟ್ರೋದಲ್ಲಿ ಡಾ। ಮಂಜುನಾಥ್‌ ಪ್ರಚಾರ

| Published : Apr 09 2024, 01:45 AM IST / Updated: Apr 09 2024, 06:05 AM IST

ಸಾರಾಂಶ

ಲೋಕಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌ ಅವರು ಮೆಟ್ರೋದಲ್ಲಿ ಪ್ರಚಾರ ನಡೆಸಿದರು

ಬೆಂಗಳೂರು: ಲೋಕಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌ ಅವರು ಮೆಟ್ರೋದಲ್ಲಿ ಪ್ರಚಾರ ನಡೆಸಿದರು.

ಸೋಮವಾರ ಸಂಜೆ ಜೆ.ಪಿ.ನಗರ ಮೆಟ್ರೋ ರೈಲಿನಲ್ಲಿ ಮಂಜುನಾಥ್‌ ಮತಯಾಚಿಸಿದರು.

ಇದೇ ಸಂದರ್ಭ ಮಾತನಾಡಿದ ಮಂಜುನಾಥ್, ಮೆಟ್ರೋ ರೈಲಿನಲ್ಲಿ ಹಲವು ಮಂದಿ ಶುಭ ಕೋರಿದ್ದು, ಹೊಸ ಅನುಭವವಾಯಿತು. ಮಂಗಳವಾರ ಯುಗಾದಿ ಹಬ್ಬವು ಹೊಸ ಸಂಕೇತವಾಗಿದ್ದು, ಚುನಾವಣೆಗೂ ಹೊಸ ಸಂಕೇತವಾಗಿದೆ. ಪ್ರಚಾರದ ವೇಳೆ ಹೃದಯ ಸ್ಪರ್ಶಿ ಸ್ಪಂದನೆ ಇದೆ. ಎಂಟು ವಿಧಾನಸಭೆ ಕ್ಷೇತ್ರದಲ್ಲಿಯೂ ಉತ್ತಮ ವಾತಾವರಣ ಇದೆ. ನನ್ನ ಆತ್ಮೀಯರು, ಗೊತ್ತಿರುವವರು ಸಹ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದು ಹೇಳಿದರು.

ಬೂತ್‌ ಮಟ್ಟದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಕ್ಷೇತ್ರದ ಜನತೆ ಹೊಸತನವನ್ನು ಹುಡುಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎನ್ನುವ ಆಶಯ ಜನರಲ್ಲಿಯೂ ಇದೆ. ಅಲ್ಲದೇ, ನನಗೆ ಸ್ಥಳೀಯ ನಾಯಕರ ಶ್ರೀರಕ್ಷೆ ಇದೆ. ಶೈಕ್ಷಣಿಕ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಮಾಡಬೇಕಿದೆ ಎಂದರು.

ಮೊದಲಿನಿಂದಲೂ ನಾನು ಹೆಚ್ಚು ಜನತೆ ಜತೆ ಸಂಪರ್ಕದಲ್ಲಿರುವವರು. ವೃತ್ತಿ ಜೀವನದುದ್ದಕ್ಕೂ ಜನ ಸಾಮಾನ್ಯರ ಜತೆ ಇದ್ದೇನೆ. ನಮ್ಮ ಶಕ್ತಿಯೇ ಜನಶಕ್ತಿಯಾಗಿದ್ದು, ಮತದಾರರೇ ನಮಗೆ ಶಕ್ತಿ. ನಾವು ಕನಕಪುರಕ್ಕೆ ಇದೇ 15 ಮತ್ತು 22ಕ್ಕೆ ಹೋಗುತ್ತಿದ್ದೇವೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು 17 ಕ್ಕೆ ಕನಕಪುರದಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಧಾನಿಗಳು ಸಹ ಇದೇ 14ರಂದು ಬರುತ್ತಿದ್ದಾರೆ. ರಾಮನಗರಕ್ಕೆ ಬರಬಹುದು. ಆದರೆ, ಕೇಂದ್ರ ಸಚಿವ ಅಮಿತ್‌ ಶಾ ಈಗಾಗಲೇ ಬಂದು ಹೋಗಿದ್ದಾರೆ ಎಂದು ತಿಳಿಸಿದರು.