ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಡಾ.ಜೆ.ಪಾಪೇಗೌಡ ರೈತ ಕುಟುಂಬದಿಂದ ಬಂದವರು. ತಮ್ಮೂರಿನ ಮೊದಲ ತಲೆಮಾರಿನ ಪದವೀಧರರು. ಪಿಎಚ್‌.ಡಿ ಪದವೀಧರರಾದ ಪಾಪೇಗೌಡರು ೧೯೫೯ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಾಗಿ ಸೇವೆ ಆಂಭಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘದಿಂದ ಒಂಬತ್ತನೇ ವರ್ಷದ ಎಂ.ಶಿವಲಿಂಗಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏ.೨ರಂದು ಸಂಜೆ ೫ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಪಿ.ಲೋಕೇಶ್ ಚಂದಗಾಲು ಹೇಳಿದರು.

ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಂ.ಶ್ರೀನಿವಾಸ್ ವಹಿಸುವರು. ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಆನಂದ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಪಾಪೇಗೌಡ ಅವರಿಗೆ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಪ್ರಶಸ್ತಿ ಪ್ರದಾನ ಮಾಡುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ಅಭಿನಂದನಾ ನುಡಿಗಳನ್ನಾಡುವರು. ಆನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಗಿಣಿಸ್ವಾಮಿ, ಜೆಡಿಎಸ್ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ರಶ್ಮಿ, ದತ್ತಿ ದಾನಿ ಎಂ.ಕೆ.ಲಕ್ಷ್ಮೀ ಉಪಸ್ಥಿತರಿರುವರು ಎಂದರು.

ಡಾ.ಜೆ.ಪಾಪೇಗೌಡ ಪರಿಚಯ:

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಡಾ.ಜೆ.ಪಾಪೇಗೌಡ ರೈತ ಕುಟುಂಬದಿಂದ ಬಂದವರು. ತಮ್ಮೂರಿನ ಮೊದಲ ತಲೆಮಾರಿನ ಪದವೀಧರರು. ಪಿಎಚ್‌.ಡಿ ಪದವೀಧರರಾದ ಪಾಪೇಗೌಡರು ೧೯೫೯ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಾಗಿ ಸೇವೆ ಆಂಭಿಸಿದರು. ಮಂಡ್ಯ, ಕೋಲಾರ, ಹಾಸನದಲ್ಲಿ ಬೋಧನಾ ವೃತ್ತಿ ನಿರ್ವಹಿಸಿದ್ದಾರೆ. ಕೆ.ವಿ.ಶಂಕರಗೌಡರು ವಿದ್ಯಾಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳಾ ಸರ್ಕಾರಿ ಕಾಲೇಜನ್ನು ಮಂಡ್ಯದಲ್ಲಿ ಪ್ರಾರಂಭಿಸುವಲ್ಲಿ, ವಿಜ್ಞಾನ ಪ್ರಯೋಗಾಲಯಗಳನ್ನು ಸಜ್ಜುಗೊಳಿಸಿ ಪರಿಕರಗಳನ್ನು ಖರೀದಿಸುವಲ್ಲಿ ಪಾಪೇಗೌಡರ ಪಾತ್ರ ಮಹತ್ವದ್ದಾಗಿದೆ ಎಂದರು.

೧೯೮೨ರಲ್ಲಿ ಪ್ರಾಂಶುಪಾಲರಾಗಿ ಬಸ್ತಿ ಹೊಂದಿ ನಿವೃತ್ತಿಯರೆಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಆನಂದಮಾರ್ಗ ತಾತ್ವಿಕ ಸಂಘಟನೆಯ ಸಂಸ್ಥಾಪಕ ಆನಂದಮೂರ್ತಿ ಅವರೊಂದಿಗೆ ಸಮೀಪದ ಬಾಂಧವ್ಯ ಹೊಂದಿ ತಾತ್ತ್ವಿಕ ಸೇವೆ ಸಲ್ಲಿಸಿದ್ದಾರೆ. ೧೯೬೯ರಲ್ಲಿ ಮಂಡ್ಯದಲ್ಲಿ ನಡೆದ ಆನಂದಮಾರ್ಗ ಕಾರ್ಯಕ್ರಮ ಐತಿಹಾಸಿಕ ಮಹತ್ವವನ್ನು ಪಡೆದು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.

ಡಾ.ಜೆ.ಪಾಪೇಗೌಡರ ಎಲ್ಲಾ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ಎಂ.ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿಯನ್ನು ೧೦ ಸಾವಿರ ರು. ನಗದು, ಪ್ರಶಸ್ತಿ ಫಲಕದೊಂದಿಗೆ ನೀಡಿ ಗೌರವಿಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಮಂಜುಳಾ, ಎ.ಜೆ.ವತ್ಸಲಾ, ಮೋಹನ್‌ಕುಮಾರ್ ಇತರರಿದ್ದರು.