ಸಾರಾಂಶ
- ಸರ್ಕಾರಿ ನೌಕರರು, ಇಲಾಖೆಗಳ ಅಧಿಕಾರಿಗಳು ಗೈರಾಗಬಾರದು: ತಹಸೀಲ್ದಾರ್ ಸೂಚನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಮತ್ತು ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಏ.14ರಂದು ಹಮ್ಮಿಕೊಳ್ಳಲಾಗುವುದು ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್‌ರಾಂ ಮತ್ತು ಡಾ.ಅಂಬೇಡ್ಕರ್ ಅವರುಗಳ ಜಯಂತಿ ಕಾರ್ಯಕ್ರಮ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂದಿನ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರಿ ನೌಕರರು ಹಾಗೂ ಎಲ್ಲ ಇಲಾಖಾಧಿಕಾರಿಗಳು ಗೈರಾಗದೇ ಹಾಜರಾಗಿ, ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾಗಬೇಕು. ಗೈರಾದವರ ಹೆಸರುಗಳನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಪಟ್ಟಿ ಮಾಡಬೇಕು ಎಂದು ತಿಳಿಸಿದರು.
ಮಹಾತ್ಮರ ಜಯಂತಿ ಕಾರ್ಯಕ್ರಮಗಳನ್ನು ಕಾಟಾಚಾರಕ್ಕೆ ಆಚರಣೆ ಮಾಡುವ ಬದಲು ಗೌರವಯುತವಾಗಿ ಹಾಗೂ ಅರ್ಥಪೂರ್ಣವಾಗಿ ಮಾಡಬೇಕಿರುವ ಜವಾಬ್ದಾರಿ ಎಲ್ಲರ ಮೇಲಿದೆ. ಅಂದಿನ ಜಯಂತಿ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30ಕ್ಕೆ ಬಾಬು ಜಗಜೀವನ್‌ರಾಂ ಮತ್ತು ಅಂಬೇಡ್ಕರ್ ಭಾವಚಿತ್ರಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದು, 10.30ಕ್ಕೆ ಕನಕ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ವೇದಿಕೆಯಲ್ಲಿ ಶಾಸಕರು, ಅಧಿಕಾರಿಗಳು, ಉಪನ್ಯಾಸ ನೀಡುವವರು ಮಾತ್ರ ಇದ್ದು ವಿವಿಧ ಡಿಎಸ್‌ಎಸ್ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ವೇದಿಕೆ ಮುಂಭಾಗದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಬೇಕೆಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಮುಖ್ಯಾಧಿಕಾರಿ ಲೀಲಾವತಿ, ಸಿಪಿಐ ಸುನಿಲ್‌ಕುಮಾರ್, ಸಮಾಜಕಲ್ಯಾಣಾಧಿಕಾರಿ ಉಮ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಮೃತ್ಯುಂಜಯ ಸ್ವಾಮಿ ಹಾಗೂ ಡಿಎಸ್‌ಎಸ್‌ನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಸಲಹೆಗಳನ್ನು ನೀಡಿದರು.ಸಭೆಯಲ್ಲಿ ದಿಡಗೂರು ತಮ್ಮಣ್ಣ, ಪ್ರಭಾಕರ, ಅಂಜುನಾಯ್ಕ, ಮಾರಿಕೊಪ್ಪ ಮಂಜಪ್ಪ, ಸೂರಟೂರು ಹನುಮಂತಪ್ಪ, ಶಾಂತರಾಜ್, ಬೆನಕನಹಳ್ಳಿ ಪರಮೇಶ್ವರಪ್ಪ ಸೇರಿದಂತೆ ಹಲವಾರು ಜನ ದಲಿತ ಮುಖಂಡರು, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.
- - - -27ಎಚ್.ಎಲ್.ಐ1:ಹೊನ್ನಾಳಿ ಪುರಸಭೆ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ್‌ರಾಂ, ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿದರು.