ಸಾರಾಂಶ
ಸೋಮವಾರಪೇಟೆ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಸಮಿತಿ , ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ್‍ರಾಂ ಜನ್ಮ ದಿನಾಚರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಮಾನತೆಯ ಸಮಾಜ ನಿರ್ಮಾಣಗೊಳ್ಳುವಲ್ಲಿ ಡಾ.ಬಾಬು ಜಗಜೀವನ್‍ರಾಂ ಕೊಡುಗೆ ಅಪಾರ. ಅವರ ಆದರ್ಶಗಳು, ತಪ್ಪು ಕಂಡರೆ ಪ್ರಶ್ನಿಸುವ ಮನೋಭಾವ ನಮ್ಮಲ್ಲಿಯೂ ಬೆಳೆಯಬೇಕೆಂದು ತಹಸೀಲ್ದಾರ್ ನವೀನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಸಮಿತಿ , ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ.ಬಾಬು ಜಗಜೀವನ್‍ರಾಂ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ದೇಶಕ್ಕೆ ಅವರು ನೀಡಿದ ಸೇವೆಯನ್ನು ಸ್ಮರಿಸಿ ಮಾತನಾಡಿದ ಅವರು, ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್‍ರಾಂ ಅವರು, ಜಾತಿ ಭೇದ ಮತ್ತು ಧರ್ಮ ಭೇದಗಳಿಲ್ಲದ ಯಾವುದೇ ಕಟ್ಟುಪಾಡುಗಳಿಲ್ಲದ ಶಿಕ್ಷಣಕ್ಕೆ ಅವಕಾಶ ನೀಡಬೇಕೆಂದು ಚಿಂತಿಸಿದ್ದರು. ಭಾರತದ ಸಂವಿಧಾನ ರಚನೆ ಸಂದರ್ಭ ಅವರು ವಿವಿಧ ಸಮಿತಿಗಳಲಿದ್ದುಕೊಂಡು ಅವರು ತಮ್ಮ ಅನುಭವ ಧಾರೆ ಎರೆದಿದ್ದರು. ಕಾರ್ಮಿಕರ ಹಾಗೂ ಶೋಷಿತರ ಕಲ್ಯಾಣಕ್ಕಾಗಿ ಹಲವಷ್ಟು ನೂತನ ಕಾಯಿದೆಗಳನ್ನು ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಸಿದ್ದೇಗೌಡ ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾ ನಾಯಕ್, ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿ, ದಲಿತ ಪರ ಸಂಘಟನೆಯ ಮುಖಂಡರು ಇದ್ದರು.