ಸಾರ್ವಜನಿಕರಿಗೆ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಲ್ಪಿಸಿಸಲು ಡಾ.ಕೆ.ಜೆ.ಕಾಂತರಾಜ್ ಕರೆ

| Published : Jul 09 2024, 12:49 AM IST

ಸಾರ್ವಜನಿಕರಿಗೆ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಲ್ಪಿಸಿಸಲು ಡಾ.ಕೆ.ಜೆ.ಕಾಂತರಾಜ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಸಹಾನುಬೂತಿಯಿಂದ ಪರಿಹಾರ ನೀಡಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಕಾಂತರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತರೀಕೆರೆ, ಅಜ್ಜಂಪುರ ತಾಲೂಕು ಉಪವಿಭಾಗ ಮಟ್ಟದ ಕುಂದುಕೊರತೆ ವಿವಾರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಸಹಾನುಬೂತಿಯಿಂದ ಪರಿಹಾರ ನೀಡಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಕಾಂತರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಉಪವಿಭಾಗ ಮಟ್ಟದ ಕುಂದು-ಕೊರತೆ ವಿವಾರಣೆ ಕಾರ್ಯಕ್ರಮದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಕಾಲದಲ್ಲಿ ಕಡತಗಳನ್ನು ವಿಲೇವಾರಿ ಮಾಡಬೇಕು. ಸಮಯ ಪಾಲನೆ ತುಂಬಾ ಅಗತ್ಯ, ಡಿ.ದರ್ಜೆ ನೌಕರರು ಒಂದು ಗಂಟೆ ಮುಂಚಿತವಾಗಿಯೇ ಕಚೇರಿಗೆ ಆಗಮಿಸಿ, ಕಚೇರಿಯನ್ನು ಸ್ವಚ್ಛಗೊಳಿಸಬೇಕು, ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, 94 ಸಿ. ಮತ್ತು ಸಿ.ಸಿ. ಹಾಗೂ ಬಗರ್ ಹುಕುಂ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಹಕ್ಕು ಪತ್ರ ವಿತರಣೆ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ಓಂಕಾರಪ್ಪ ಎಂ. ಮಾತನಾಡಿ ಸಮತಳ ಸಿದ್ದಾರ್ಥ ನಗರದಲ್ಲಿ ಪರಿಶಿಷ್ಟ ಜಾತಿ ಆದಿಕರ್ನಾಟಕ ಜನಾಂಗದವರು 1997 ರಿಂದಲೂ ಸ.ನಂ.43ರಲ್ಲಿ ವಾಸಿಸುತ್ತಿದ್ದು, ಇದನ್ನು ಮನಗಂಡು ಅಂದಿನ ಜಿಲ್ಲಾಧಿಕಾರಿಗಳು 2001ರಲ್ಲಿ ನಾಲ್ಕು ಎಕರೆ ಸರ್ಕಾರಿ ಗೋಮಾಳ ಸ.ನಂ. 45ರಲ್ಲಿ 4 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಿ ಆದೇಶಿಸಲಾಗಿದೆ. ಸ.ನಂ.43ರಲ್ಲಿ ಇತ್ತೀಚೆಗೆ ಬೇರೇ ಬೇರೆ ಭಾಗಗಳಿಂದ ಬಂದಿರುವವರು ಅದರಲ್ಲೂ ಸರ್ಕಾರಿ ನೌಕರರು ಸ್ಥಳೀಯರ ವಶದಲ್ಲಿದ್ದ ಹೆಚ್ಚುವರಿ ಜಾಗವನ್ನು ಕೊಂಡುಕೊಂಡು ಕಟ್ಟಿಸಿಕೊಂಡಿರುತ್ತಾರೆ ಎಂದು ತಿಳಿಸಿದರು.

ಈ ಕಾರಣದಿಂದ ಸ.ನಂ.43ರಲ್ಲಿ 94 ಸಿ.ಅಡಿಯಲ್ಲಿ ನಿವೇಶನ ನೀಡದೆ ಈಗಾಗಲೇ 2001ರಲ್ಲಿ ಜಿಲ್ಲಾಧಿಕಾರಿ ನಿವೇಶನಕ್ಕಾಗಿ ಆದೇಶಿಸಿರುವ ಸ.ನ.45 ಅದೇಶವನ್ನು 43 ಎಂದು ತಿದ್ದುಪಡಿ ಮಾಡಿಸಬೇಕು. ದಲಿತರಿಗೆ ಆಶ್ರಯ ಬಡಾವಣೆ ನಿರ್ಮಿಸಿ ಸೂರು ನೀಡಬೇಕೆಂದು ಹೇಳಿದರು.

ನೇರಲೆಕೆರೆ ಸ.ನಂ.272ರ ಸರ್ಕಾರಿ ಜಾಗದ ಖಾಸಗಿ ಶಾಲೆಯನ್ನು ಕೂಡಲೇ ಸ್ಥಳಾಂತರಿಸಬೇಕು. ನೇರಲೆಕೆರೆ ಗ್ರಾಮದ ಬಳಸುವ ಕಟ್ಟೆಯ ಒತ್ತುವರಿದಾರರನ್ನು ಖುಲ್ಲಾಗೊಳಿಸ ಬೇಕು, ಸ.ನಂ.1 ರಿಂದ 7 ರವರೆಗೆ 1966ರಲ್ಲಿ ಭೂಸ್ವಾಧೀನವಾದ ಗ್ರಾಮಠಾಣದ ಜಾಗವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಉಪ ವಿಭಾಗಾಧಿಕಾರಿ ಡಾ.ಕೆ.ಕಾಂತರಾಜ್ ಮಾತನಾಡಿ ನೇರಲಕೆರೆ ಮತ್ತು ಸಮತಳ ಗ್ರಾಮಗಳಲ್ಲಿ ಸರ್ಕಾರಿ ಜಾಗದಪಲ್ಲಿ ಅನಧಿಕೃತ ಕಟ್ಟಡ ಪರಿಶೀಲಿಸಿ ನೊಟೀಸು ನೀಡಿ ಮತ್ತು ಸಮಜಾಯಿಶಿಗೆ ಕಾಲಾವಕಾಶ ನೀಡಬೇಕು, ನಿಯಮಬಾಹಿರವಾಗಿ ನಿರ್ಮಾಣವಾಗಿದ್ದರೆ, ಕಾಲಮಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯ ಪತ್ರಕರ್ತ ವಿ.ಶೇಖರ್ ಮಾತನಾಡಿ ಸಿದ್ದರಹಳ್ಳಿ ಗ್ರಾಮದ ಸ.ನ 25 ರಲ್ಲಿ ಹತ್ತು ಎಕರೆ ಸ್ಮಶಾನಕ್ಕೆ ಮೀಸಲಾಗಿದ್ದು ಈ ಜಾಗದಲ್ಲಿ ಒತ್ತುವರಿ ಯಾಗಿದ್ದು ಈ ಒತ್ತುವರಿ ತೆರವುಗೊಳಿಸಬೇಕು, ದುಗ್ಲಾಪುರ ಗ್ರಾಮದ ಸ.ನಂ.17ರಲ್ಲಿ 2 ಎಕರೆ 17 ಗುಂಟೆ ಸ್ಮಶಾನಕ್ಕೆ ಗ್ರಾಮಸ್ಥರು ಬಳಕೆ ಮಾಡಿಕೊಳ್ಳುತ್ತಿದ್ದು ಆ ಜಾಗವೂ ಒತ್ತುವರಿಯಾಗಿದ್ದು ಸರ್ವೆ ಮಾಡಿಸಿ ಸ್ಮಶಾನಕ್ಕೆ ಮೀಸಲಿಡಬೇಕೆಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಹಳೆಯೂರು ಕುಮಾರ್ ಮಾತನಾಡಿ ಹಳಿಯಾರು ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ ಶಾಲಾ ಜಾಗ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸ ಬೇಕೆಂದು ಒತ್ತಾಯಿಸಿದರು.

ಉಪವಿಭಾಗೀಯ ಮಟ್ಟದ ಪ.ಜಾತಿ, ಪ.ಪಂಗಡ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಎಸ್.ಎನ್.ಸಿದ್ರಾಮಪ್ಪ ಮಾತನಾಡಿ ಪಟ್ಟಣದ ಬಾಪೂಜಿ ಕಾಲೋನಿಯಲ್ಲಿ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣ ಕಾಮಗಾರಿ ಕಾರ್ಯ ಅರ್ಧಕ್ಕೆ ನಿಂತಿದೆ ಅದನ್ನು ಪೂರ್ಣಗೊಳಿಸ ಬೇಕೆಂದು ಒತ್ತಾಯಿಸಿದರು.ತರೀಕೆರೆ ತಹಸೀಲ್ದಾರ್ ವಿ.ಎಸ್.ರಾಜೀವ್, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.

8ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನಡೆದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಉಪವಿಭಾಗ ಮಟ್ಟದ ಕುಂದುಕೊರತೆ ವಿವಾರಣೆ ಸಭೆ ಅಧ್ಯಕ್ಷತೆಯನ್ನು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ವಹಿಸಿದ್ದರು. ತರೀಕೆರೆ ತಹಸೀಲ್ದಾರ್ ವಿ.ಎಸ್.ರಾಜೀವ್, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಮತ್ತಿತರರು ಇದ್ದರು.