ಸಾರಾಂಶ
ಹೃದಯದ ರಕ್ತನಾಳದಲ್ಲಿ ತುಂಬಾ ಕ್ಯಾಲ್ಸಿಯಂ ಇದ್ದರೆ ಈ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೆವು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ರೋಗಿಯೊಬ್ಬರ ಹೃದಯಕ್ಕೆ ಆರ್ ಬೈಟಲ್ ಅಥೆರೆಕ್ಟಮಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ತಿಳಿಸಿದರು.ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆರ್ ಬೈಟಲ್ ಅಥೆರೆಕ್ಟಮಿ ಚಿಕಿತ್ಸೆಗೆ ಒಳಗಾದ ತಾಲೂಕಿನ ಉತ್ತನಹಳ್ಳಿಯ 50 ವರ್ಷದ ಪುಟ್ಟಸ್ವಾಮಿ ಅವರಿಗೆ ಆಸ್ಪತ್ರೆಯ ವೈದ್ಯ ಡಾ.ಬಿ. ದಿನೇಶ್ ನೇತೃತ್ವದ ತಂಡ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದೆ ಎಂದರು.
ಹೃದಯದ ರಕ್ತನಾಳದಲ್ಲಿ ತುಂಬಾ ಕ್ಯಾಲ್ಸಿಯಂ ಇದ್ದರೆ ಈ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೆವು. ಈಗ ರಕ್ತನಾಳದ ಕ್ಯಾಲ್ಸಿಯಂ ಅನ್ನು ಪುಡಿಪುಡಿ ಮಾಡಿ ಸ್ಟಂಟ್ ಹಾಕುವ ವಿಧಾನವಾಗಿದೆ. ಈ ವಿಧಾನದಿಂದ ರಕ್ತನಾಳಕ್ಕೆ ಅಪಾಯ ಕಡಿಮೆ ಇದ್ದು, ಇದರ ವೆಚ್ಚ ಸುಮಾರು 2.5 ಲಕ್ಷ ಆಗುತ್ತದೆ ಎಂದರು.ಡಾ.ಬಿ. ದಿನೇಶ್ ಮಾತನಾಡಿ, ರೋಗಿಗೆ ಬೈಪಾಸ್ ಮಾಡಲು ರಕ್ತನಾಳಗಳು ಸೂಕ್ತವಿಲ್ಲದ ಕಾರಣ ಆರ್ ಬೈಟಲ್ ಅಥೆರೆಕ್ಟಮಿ ವಿಧಾನದಿಂದ ರಕ್ತ ನಾಳದಲ್ಲಿರುವ ಕ್ಯಾಲ್ಸಿಯಂ ಫ್ಯಾಟ್ ತೆಗೆದು ರಕ್ತನಾಳವನ್ನು ಶುದ್ಧೀಕರಿಸಿ ನಂತರ ಸ್ಟಂಟ್ ಅಳವಡಿಸಲಾಗುತ್ತದೆ. ರಕ್ತನಾಳದಲ್ಲಿ ಯಾವುದೇ ತರನಾದ ತಿರುವುಗಳಿದ್ದರೂ ಕೂಡ ಈ ಚಿಕಿತ್ಸೆ ಮಾಡಬಹುದು. ಇದರಿಂದ ರೋಗಿಗೆ ಯಾವುದೇ ತೊಂದರೆಯಾಗುವುದಿಲ್ಲ. ಶಸ್ತ್ರ ಚಿಕಿತ್ಸೆ ಆದ ನಂತರ ಮೂರೇ ದಿನದಲ್ಲಿ ರೋಗಿಯನ್ನು ಮನೆಗೆ ಕಳುಹಿಸಬಹುದು ಎಂದರು.
ಈ ವೇಳೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್, ಆರ್ಥಿಕ ಸಲಹೆಗಾರರಾದ ಅವಿನಾಶ್ ಜೆರಾಲ್ಡ್, ಡಾ. ಶ್ರೀಮಂತ್, ಡಾ. ಸ್ನೇಹಲ್, ಡಾ. ಭಾರತಿ, ಡಾ. ಅರ್ಪಿತಾ, ಡಾ. ನಂಜಪ್ಪ, ಡಾ. ಮಹೇಶ್, ಡಾ. ನಿತಿನ್, ಡಾ. ರಾಗಸುಧ, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಗುರುಮೂರ್ತಿ, ಸಂತೋಷ್, ನವೀನ್, ಕೃಷ್ಣ, ಪ್ರತಾಪ್, ದೀಪಿಕಾ, ದಯಾನಂದ್ ಇದ್ದರು.