ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಂಸದರಾಗಿ ಆಯ್ಕೆಯಾಗಿರುವ ಡಾ.ಕೆ.ಸುಧಾಕರ್ ರವರು ಮುಂದಿನ ಐದು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸುವ ವಿಶೇಷ ಯೋಜನೆ ರೂಪಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ರಾಮಲಿಂಗಪ್ಪ ತಿಳಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಭನದಲ್ಲಿ ಬುಧವಾರ ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾಗಿ ಶಾಶ್ವತ ನೀರಾವರಿ ಅನುಷ್ಠಾನಗಳ ಬಗ್ಗೆ ನೂತನ ಸಂಸದರು ಶ್ರಮಿಸಲಿದ್ದಾರೆ.ಎಂದರು.ಶಾಶ್ವತ ನೀರಾವರಿ ಯೋಜನೆಗೆ ಒತ್ತುವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣದ ಕನಸನ್ನು ನನಸು ಮಾಡಲು ಹಾಗೂ ಕ್ಷೇತ್ರದ ಎಲ್ಲರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಸಮರ್ಪಣಾ ಮನೋಭಾವದಿಂದ ಡಾ.ಕೆ.ಸುಧಾಕರ್ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯದಲ್ಲಿಯೇ ಲೋಕಸಭಾ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿ ಮಾಡಲು ಹಾಗೂ ಕೇಂದ್ರ ಆಯೋಜಿತ ಯೋಜನೆಗಳನ್ನು ಚಿಕ್ಕಬಳ್ಳಾಪುರಕ್ಕೆ ತಂದು ಅನುಷ್ಠಾನಗೊಳಿಸಿ ಅಭಿವೃದ್ಧಿ ಮಾಡಲಿದ್ದಾರೆ. ಆ ಪೈಕಿ ಕೃಷ್ಣ, ಕಾವೇರಿ, ಎತ್ತಿನ ಹೊಳೆ ಸೇರಿದಂತೆ ಅನೇಕ ಶಾಶ್ವತ ನೀರಾವರಿ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಪಡಿಸಲಿದ್ದಾರೆ ಎಂದರು.
ನಮ್ಮ ಜಿಲ್ಲೆಯು ಕೃಷಿ ಪ್ರಧಾನವಾದ ಕ್ಷೇತ್ರವಾಗಿದ್ದು ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಸಮಿತಿಯನ್ನು ರಚಿಸಿ ಇಸ್ರೇಲ್ ಮಾದರಿಯ ಕೃಷಿ ಯೋಜನೆಗಳ ಅನುಷ್ಠಾನಕ್ಕೂ ಬದ್ಧರಾಗಿರುವದಾಗಿ ಈಗಾಗಲೇ ನೂತನ ಸಂಸದರು ಘೋಷಣೆ ಮಾಡಿದ್ದಾರೆ. ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಕ್ಷೇತ್ರದಲ್ಲೂ ಮೈತ್ರಿಗೆ ಬಹುಮತಕಾಂಗ್ರೆಸ್ ಶಾಸಕರು ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದರೂ, ಜನರು ಅದರ ಬಗ್ಗೆ ಎಚ್ಚೆತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಳೆದ ಸಲದ 10 ಸಾವಿರ ಮತಗಳ ನಷ್ಟ ಕಳೆದು, ಇನ್ನೂ 21 ಸಾವಿರ ಹೆಚ್ಚು ಮತಗಳನ್ನು ಜನರು ನೀಡಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ 83 ಸಾವಿರ ಮತಗಳು ಹೆಚ್ಚು ಬಂದಿದೆ. ನೆಲಮಂಗಲ ಕ್ಷೇತ್ರದಲ್ಲಿ 33 ಸಾವಿರ ಅಧಿಕ ಮತಗಳು ಬಂದಿವೆ. ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿಗೆ ಮತ ಬಂದಿದೆ. ಜೊತೆಗೆ ಜೆಡಿಎಸ್ ಸಹಯೋಗವಿದ್ದಿದ್ದರಿಂದ ಹೆಚ್ಚು ಬಲ ಬಂದಿದೆ ಎಂದರು.
ಸುಮಾರು 40 ದಿನಗಳ ಕಾಲ ಹಗಲಿರುಳು ಶ್ರಮಿಸಿ ಈ ಐತಿಹಾಸಿಕ ಫಲಿತಾಂಶಕ್ಕೆ ಕಾರಣೀಭೂತರಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರು, ಮುಖಂಡರು ಹಾಗೂ ಹಿತೈಷಿಗಳಿಗೆ ಮತ್ತು ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಕಾರ್ಯಧ್ಯಕ್ಷ ಕೆ. ಆರ್. ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷರಾದ ಆನಂದರೆಡ್ಡಿ ಬಾಬು, ಲೀಲಾವತಿ ಶ್ರೀನಿವಾಸ್, ನಗರಸಭೆ ಸದಸ್ಯ ಮಟಮಪ್ಪ, ನಗರಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಜೆಡಿಎಸ್ ತಾಲೂಕ ಅಧ್ಯಕ್ಷ ಕೊಳವನಹಳ್ಳಿ ಕೆ.ಬಿ.ಮುನಿರಾಜು, ದಸಂಸ ಮುಖಂಡ ಬಿ.ಎನ್.ಗಂಗಾಧರ್ ಮತ್ತಿತರರು ಇದ್ದರು.