ಸಾರಾಂಶ
ಕಾರ್ಕಳ: ಅಮೆರಿಕದ ತುಳುಸಂಸ್ಥೆ ಆಟ (ATA - American Tulu Association) ನೀಡುವ ‘ಆಟ ಸಿರಿಮುಡಿ ಪ್ರಶಸ್ತಿ- 2025’ಕ್ಕೆ ಪ್ರಸಿದ್ಧ ಭಾಷಾ ತಜ್ಞ, ವಿಮರ್ಶಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಭಾಜನರಾಗಿದ್ದಾರೆ.ಅವರು ರಚಿಸಿರುವ ‘ತುಳು ಕಾವ್ಯಮೀಮಾಂಸೆ’ ಎಂಬ ವಿಶ್ಲೇಷಣಾತ್ಮಕ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ತುಳು ಸಾಹಿತ್ಯದ ತಾತ್ವಿಕ ಅಧ್ಯಯನ ಹಾಗೂ ವಿಮರ್ಶಾ ಪರಂಪರೆಯಲ್ಲಿ ನವೀನ ದಿಕ್ಕು ನೀಡಿರುವ ಈ ಕೃತಿಯು ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.75,000 ರು. ನಗದು ಮತ್ತು ಸ್ಮರಣಿಕಾ ಫಲಕವನ್ನು ಒಳಗೊಂಡಿರುವ ಈ ಅಂತಾರಾಷ್ಟ್ರೀಯ ಪುರಸ್ಕಾರವನ್ನು ಆಟ ಸಂಸ್ಥೆಯು ಪ್ರತಿವರ್ಷ ತುಳು ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಸಾಧಕರಿಗೆ ನೀಡುತ್ತದೆ.ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಕಳೆದ ಹಲವು ದಶಕಗಳಿಂದ ತುಳುನಾಡಿನ ಭಾಷಾ, ಸಾಹಿತ್ಯ ಹಾಗೂ ಸಂಸ್ಕೃತಿಯ ಸಂಶೋಧನೆ ಹಾಗೂ ಸಾಹಿತ್ಯಿಕ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದು, ಈ ಪ್ರಶಸ್ತಿಯ ಮೂಲಕ ಮತ್ತೊಂದು ಉನ್ನತ ಸಾಧನೆ ದಾಖಲಿಸಿದ್ದಾರೆ.