ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆಯವರು 12ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು/ಮಂಗಳೂರು:
ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆಯವರು 12ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 83ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಇದೇ ವೇಳೆ, ಉಪಾಧ್ಯಕ್ಷರಾಗಿ ಆರ್.ಎಂ.ಹೆಗಡೆ ಬಾಳೆಸರ, ಶ್ರೀಧರ ಜೆ.ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ಸಿಎ.ವೇಣುವಿಘ್ನೇಶ ಸಂಪ, ಕಾರ್ಯದರ್ಶಿಯಾಗಿ ಪ್ರಶಾಂತ ಕುಮಾರ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಯಲಹಂಕ, ಮಾಧ್ಯಮ ಸಂಪರ್ಕ ಅಧಿಕಾರಿಯಾಗಿ ಸಂದೇಶ ತಲಕಾಲಕೊಪ್ಪ ಆಯ್ಕೆಯಾದರು.
ಬಳಿಕ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಜೆ, ಸಂಘ-ಸಂಸ್ಥೆಗಳು ಸಕ್ರಿಯವಾಗಿದ್ದಾಗ ಸಮಾಜದಿಂದ ಸಹಜವಾಗಿ ಬೆಂಬಲ ವ್ಯಕ್ತವಾಗುತ್ತದೆ. ಕಾರ್ಯಕ್ರಮಗಳು ಹೆಚ್ಚಾಗಿ ನಡೆದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಹಾಗೂ ನಾವು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಹವ್ಯಕ ಮಹಾಸಭೆ ಈ ದಿಸೆಯಲ್ಲಿ ಪ್ರಾದೇಶಿಕವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಜಾತಿಯನ್ನೂ ಮೀರಿ ಸಮಷ್ಟಿ ಸಮಾಜಕ್ಕೆ ಉಪಕಾರಿಯಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.ಮಹಿಳೆಯರು ಸಕ್ರಿಯರಾದಾಗ ಮಾತ್ರ ಸಮಗ್ರ ಸಮಾಜದ ಜಾಗೃತಿ ಸಾಧ್ಯ. ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಯನ್ನು ಬಲಗೊಳಿಸಲಾಗುತ್ತಿದ್ದು, ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿರುವ 83 ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಯನ್ನು ಪ್ರಾರಂಭಿಸಲಾಗುತ್ತಿದೆ. ಡಿ.20ರಂದು ಬೃಹತ್ ಹವ್ಯಕ ಮಹಿಳಾ ಸಮಾವೇಶವನ್ನು ಆಯೋಜಿಸಲಾಗುವುದು. ಮುಂದಿನ ವರ್ಷ ಯುವಕರ ಸಂಘಟನೆಗೆ ಯೋಜಿಸಲಾಗಿದ್ದು, ದೇಶ-ಹೊರದೇಶಗಳ 84 ಪ್ರಾಂತ್ಯಗಳಲ್ಲಿ ಹವ್ಯಕ ಯುವ ವೇದಿಕೆ ಕಾರ್ಯಾರಂಭ ಮಾಡಲಿದೆ. ಮಹಿಳೆಯರು ಹಾಗೂ ಯುವಕರು ಸಂಘಟಿತರಾದಾಗ ಬಲಿಷ್ಠ ಸಂಘಟನೆ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೈವಾಹಿಕ ಸಮಸ್ಯೆಗಳು ಸೇರಿದಂತೆ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳಿಗೆ ಸಂಘಟನೆಯೇ ಪರಿಹಾರವಾಗಿದ್ದು, ಸಂಘಟನೆ ಬಲಿಷ್ಠವಾದಾಗ ಸಮಾಜ ಸುಭಿಕ್ಷೆಯಿಂದ ಇರಲು ಸಾಧ್ಯ ಎಂದರು.ಅ.10ರಂದು ಪ್ರತಿಭಟನೆ:
ನಮ್ಮ ಮೂಲ ನೆಲೆಗಳು ನದಿ ತಿರುವು ಯೋಜನೆ, ಪರಿಸರ ಹಾನಿ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಕ್ಟೋಬರ್ 10 ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಈ ಕುರಿತಾಗಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.ಪದಾಧಿಕಾರಿಗಳು ಹಾಗೂ ಸಾಗರ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ಬೇರೆ, ಬೇರೆ ಪ್ರಾಂತ್ಯಗಳ ನಿರ್ದೇಶಕರು-ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.