ಇಲ್ಲಿಯ ವೀರಶೈವ ಸೇವಾ ಸಮಾಜ, ಪಾರ್ವತಿ ಮಹಿಳಾ ಸಮಾಜ, ಬಸವೇಶ್ವರ ಯುವಕ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಶ್ರೀ ಶಿವಯೋಗೀಶ್ವರ ವಿದ್ಯಾಸಂಸ್ಥೆ ಸೇರಿದಂತೆ ಶ್ರೀಗಳ ಅಪಾರ ಭಕ್ತವೃಂದರೊಡಗೂಡಿ ಡಾ. ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ ೭೪ ನೇ ಜನ್ಮವರ್ಧಂತಿ ಕಾರ್ಯಕ್ರಮವನ್ನು ಪಟ್ಟಣದ ವಿರಕ್ತ ಮಠದ ಗದ್ದುಗೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಲ್ಲಿಯ ವೀರಶೈವ ಸೇವಾ ಸಮಾಜ, ಪಾರ್ವತಿ ಮಹಿಳಾ ಸಮಾಜ, ಬಸವೇಶ್ವರ ಯುವಕ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಶ್ರೀ ಶಿವಯೋಗೀಶ್ವರ ವಿದ್ಯಾಸಂಸ್ಥೆ ಸೇರಿದಂತೆ ಶ್ರೀಗಳ ಅಪಾರ ಭಕ್ತವೃಂದರೊಡಗೂಡಿ ಡಾ. ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳ ೭೪ ನೇ ಜನ್ಮವರ್ಧಂತಿ ಕಾರ್ಯಕ್ರಮವನ್ನು ಪಟ್ಟಣದ ವಿರಕ್ತ ಮಠದ ಗದ್ದುಗೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ಡಾ. ಶ್ರೀ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳವರ ಪರಿಶ್ರಮದಿಂದ ಇಂದು ಮಠ ಅಪಾರ ಭಕ್ತರನ್ನು ಹೊಂದಿದೆ. ಕೇವಲ ರಾಜ್ಯವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ನೊಣವಿನಕೆರೆ ಮಠ ಖ್ಯಾತಿಯನ್ನು ಪಡೆದಿರುವುದು ಶ್ಲಾಘನೀಯ. ಮುಂದಿನ ದಿನಮಾನಗಳಲ್ಲಿ ತುರುವೇಕೆರೆ ವಿರಕ್ತ ಮಠ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸುವಂತಹ ಹೆಚ್ಚಿನ ಶಕ್ತಿ ಹಾಗೂ ಆಯಸ್ಸನ್ನು ಶ್ರೀಗಳಿಗೆ ಆ ದೇವರು ದಯಪಾಲಿಸಲಿ ಎಂದು ಎಂ.ಡಿ.ಲಕ್ಷ್ಮೀನಾರಾಯಣ್ ಆಶಿಸಿದರು.ತಾಲೂಕು ದಂಡಾಧಿಕಾರಿ ಕುಂ.ಇ.ಅಹಮದ್ ಮಾತನಾಡಿ ಶ್ರೀಗಳು ಅಕ್ಷರ ದಾಸೋಹ, ಅನ್ನದಾಸೋಹದ ಮೂಲಕ ಇಡೀ ಸಮಾಜವನ್ನು ತಿದ್ದುವಂತ ಕೆಲಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಪರಸ್ಪರ ಪ್ರೀತಿ ವಿಶ್ವಾಸದಿಂದ ಮುನ್ನೆಡೆಯೋಣ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡೋಣವೆಂದರು. ಅಭಿನವ ಶ್ರೀಕಾಡಸಿದ್ದೇಶ್ವರ ಕಿರಿಯ ಸ್ವಾಮೀಜಿಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಗುರುಗಳ ಅಪಾರ ಭಕ್ತರಿಂದ ೭೪ ನೇ ಜನ್ಮವರ್ಧಂತಿಯನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಮುಂದಿನ ವರ್ಷ ೭೫ ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಇನ್ನೂ ಅದ್ದೂರಿಯಾಗಿ ಆಚರಿಸೋಣ. ಗುರುಗಳ ಬೆಳ್ಳಿ ತುಲಾಭಾರ ಹಾಗೂ ಕಾಡಸಿದ್ದೇಶ್ವರ ಹಾಗೂ ವೀರಗಂಗಾಧರೇಶ್ವರರ ಬೆಳ್ಳಿ ರಥೋತ್ಸವ ಮಾಡಬೇಕೆಂಬ ಗುರುಗಳ ಆಸೆಯನ್ನು ಪೂರೈಸೋಣ. ಅದಕ್ಕೆ ಭಕ್ತವೃಂದವರ ಸಹಕಾರ ಅತ್ಯಗತ್ಯವೆಂದರು. ಪ್ರತಿ ಶುಕ್ರವಾರ ಮೌನಾಚರಣೆಯಲ್ಲಿರುವ ಡಾ.ಶ್ರೀ.ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಮೌನದಿಂದಲೇ ಭಕ್ತರಿಗೆ ಆಶೀರ್ವಾದ ನೀಡಿ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಹೇಮಾವತಿ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕೆ.ಎಂ.ಬಿಂದಿ, ವೀರಶೈವ ಮುಖಂಡರಾದ ಗುರುಚನ್ನಬಸವಾರಾಧ್ಯ್ಯ, ಪಿಎಸ್‌ಐ ಮೂರ್ತಿ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ, ವಿನಯ್, ಚಿರಂಜೀವಿ, ಎಂ.ಡಿ.ಮೂರ್ತಿ, ಹೆಚ್.ಆರ್.ರಾಮೇಗೌಡ, ಮುಖ್ಯ ಶಿಕ್ಷಕ ನಟೇಶ್, ಸಮಾಜ ಬಾಂಧವರಾದ ಮಲ್ಲಿಕಾರ್ಜುನ್, ಶಿವಾನಂದ್, ಯೋಗೀಶ್, ಮಹೇಶ್, ನವೀನ್‌ಬಾಬು, ಸುನಿಲ್‌ಬಾಬು, ಗುಡದ್‌ರಾಮ್, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅನೇಕ ಮುಖಂಡರು ಹಾಗೂ ಅಪಾರ ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.