ಡಾ. ಕೇಶವ ಅಬ್ಬಯ್ಯ ಗದಗ ವೈದ್ಯಕೀಯ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾಗಿದ್ದು, ಕೋರಿಕೆಯ ಮೇರೆಗೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗಕ್ಕೆ ಮೂರು ವರ್ಷಗಳ ಅವಧಿಗೆ ನಿಯೋಜಿಸಿ 2022ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು.
ಧಾರವಾಡ:
ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ಸಹೋದರ ಡಾ. ಕೇಶವ ಅಬ್ಬಯ್ಯ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶವನ್ನು ಇಲ್ಲಿಯ ಹೈಕೋರ್ಟ್ ಪೀಠವು ರದ್ದುಗೊಳಿಸಿ ಆದೇಶಿಸಿದೆ.ಡಾ. ಕೇಶವ ಅಬ್ಬಯ್ಯ ಗದಗ ವೈದ್ಯಕೀಯ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾಗಿದ್ದು, ಕೋರಿಕೆಯ ಮೇರೆಗೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ದಂತ ಚಿಕಿತ್ಸಾ ವಿಭಾಗಕ್ಕೆ ಮೂರು ವರ್ಷಗಳ ಅವಧಿಗೆ ನಿಯೋಜಿಸಿ 2022ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಇದಾದ ಬಳಿಕ ತಾಯಿಯ ಅನಾರೋಗ್ಯದ ಕಾರಣದಿಂದ ದಂತ ಚಿಕಿತ್ಸಾ ವಿಭಾಗಕ್ಕೆ ಹೆಚ್ಚುವರಿ ಪ್ರಾಧ್ಯಾಪಕ ಹುದ್ದೆ ಸೃಜನೆ ಮಾಡಬೇಕೆಂಬ ಷರತ್ತಿನೊಂದಿಗೆ ಅವರನ್ನು ರಾಜ್ಯ ಸರ್ಕಾರ ಕೆಎಂಸಿಆರ್‌ಐಗೆ 2024ರಲ್ಲಿ ವರ್ಗಾವಣೆ ಮಾಡಿತ್ತು.
ಈ ಮಧ್ಯೆ ಸೋದರ ಡಾ. ಕೇಶವ ಅಬ್ಬಯ್ಯ ಅವರ ಹುದ್ದೆಯನ್ನು ಕೆಎಂಸಿಆರ್‌ಐನಲ್ಲಿ ಕಾಯಂ ಮಾಡಬೇಕು ಎಂದು ಕೋರಿ ಶಾಸಕ ಪ್ರಸಾದ ಅಬ್ಬಯ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಹ ಮಾಡಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.ಸರ್ಕಾರದ ವರ್ಗಾವಣೆ ಆದೇಶವು ಕಾನೂನಿಗೆ ಹಾಗೂ ಭಾರತೀಯ ವೈದ್ಯಕೀಯ ಪರಿಷತ್ (ಎನ್.ಎಂ.ಸಿ.) ನಿಯಮಗಳಿಗೆ ವಿರುದ್ಧವಾಗಿದೆ. ಕಾರಣ ಅದನ್ನು ರದ್ದುಪಡಿಸಲು ಕೋರಿ ಕೆಎಂಸಿಆರ್‌ಐ ದಂತ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಸುನೀಲ್ ಪಾಟೀಲ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ರಿಟ್ ಅರ್ಜಿಯನ್ನು ಪುರಸ್ಕರಿಸಿ ಗದಗ ವೈದ್ಯಕೀಯ ಸಂಸ್ಥೆಯಿಂದ ಹುಬ್ಬಳ್ಳಿ ಕೆಎಂಸಿಆರ್‌ಐಗೆ ಸರ್ಕಾರ ಮಾಡಿದ ಡಾ. ಕೇಶವ ಅಬ್ಬಯ್ಯ ಅವರ ವರ್ಗಾವಣೆಯನ್ನು ರದ್ದುಪಡಿಸಿದೆ.