ಶಿಕ್ಷಣ, ಕೃಷಿ, ಸಹಕಾರ, ಆರೋಗ್ಯ ಹಾಗೂ ಕೈಗಾರಿಕೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಕಾಯಕರತ್ನ ಡಾ.ಪ್ರಭಾಕರ ಕೋರೆ ಅವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿರುವುದು ಗಡಿ ಭಾಗದ ಜನರಲ್ಲಿ ಅಪಾರ ಸಂತಸ ಮೂಡಿಸಿದೆ ಎಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ಕನ್ನಡಪ್ರಭ ವಾರ್ತೆ ವಾರ್ತೆ ಚಿಕ್ಕೋಡಿ
ಶಿಕ್ಷಣ, ಕೃಷಿ, ಸಹಕಾರ, ಆರೋಗ್ಯ ಹಾಗೂ ಕೈಗಾರಿಕೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಕಾಯಕರತ್ನ ಡಾ.ಪ್ರಭಾಕರ ಕೋರೆ ಅವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿರುವುದು ಗಡಿ ಭಾಗದ ಜನರಲ್ಲಿ ಅಪಾರ ಸಂತಸ ಮೂಡಿಸಿದೆ ಎಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.ಕಾರ್ಖಾನೆಯ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಘೋಷಣೆಯಾದುದು ನಮ್ಮೆಲ್ಲರ ಸಂಭ್ರಮವನ್ನು ದ್ವಿಗುಣಗೊಳಿಸಿದೆ. ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಅವರು ವಹಿಸಿಕೊಂಡ ಸಂದರ್ಭದಲ್ಲಿ ಕೇವಲ 36 ಅಂಗಸಂಸ್ಥೆಗಳನ್ನು ಹೊಂದಿದ್ದ ಸಂಸ್ಥೆ, ಇಂದು ಅವರ ದೂರದೃಷ್ಟಿ ಮತ್ತು ನಾಯಕತ್ವದಿಂದ ವೈದ್ಯಕೀಯ, ತಾಂತ್ರಿಕ, ವಾಣಿಜ್ಯ, ಕಲೆ, ವಿಜ್ಞಾನ, ಕಾನೂನು, ಕೃಷಿ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 316ಕ್ಕೂ ಅಧಿಕ ಅಂಗಸಂಸ್ಥೆಗಳಿಗೆ ವಿಸ್ತರಿಸಿ ರಾಷ್ಟ್ರಮಟ್ಟದಲ್ಲೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದೆ ಎಂದು ತಿಳಿಸಿದರು.ಗ್ರಾಮೀಣ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ತಲುಪುವಂತೆ ಮಾಡಿದ ಶ್ರೇಯ ಸಂಪೂರ್ಣವಾಗಿ ಡಾ.ಕೋರೆ ಅವರಿಗೆ ಸಲ್ಲುತ್ತದೆ. ಶಿಕ್ಷಣ, ವೈದ್ಯಕೀಯ, ರಾಜಕೀಯ ಕ್ಷೇತ್ರಗಳ ಜೊತೆಗೆ ರೈತರು, ನಿರುದ್ಯೋಗಿ ಯುವಕರು ಹಾಗೂ ಬಡಜನರನ್ನು ಸಾಮಾಜಿಕ-ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಹಲವಾರು ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ ಎಂದರು.ದಿ.ಚಿದಾನಂದ ಕೋರೆಯವರ ನಿಧನದ ಬಳಿಕ 1981ರಲ್ಲಿ ತಮ್ಮ 35-36ನೇ ವಯಸ್ಸಿನಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಆಯ್ಕೆಯಾಗಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಡಾ.ಕೋರೆ, ನಂತರ ಮಾರ್ಗದರ್ಶಕರಾಗಿ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯವನ್ನು ಹಂತ ಹಂತವಾಗಿ ಹೆಚ್ಚಿಸಿ ಇಂದು ದಿನಕ್ಕೆ 10,000 ಮೆ.ಟನ್‌ಗೆ ವಿಸ್ತರಿಸಿದ್ದಾರೆ. ಜೊತೆಗೆ 31.7 ಮೆ.ವ್ಯಾಟ್ ಸಹವಿದ್ಯುತ್ ಹಾಗೂ 200 ಕೆಎಲ್‌ಪಿಡಿ ಡಿಸ್ಟಿಲರಿ ಘಟಕಗಳೊಂದಿಗೆ ಕಾರ್ಖಾನೆಯನ್ನು ಮಾದರಿಯಾಗಿ ರೂಪಿಸಿದ್ದಾರೆ ಎಂದರು.ರೈತರ ಹಿತದೃಷ್ಟಿಯಿಂದ ಸ್ಥಾಪಿಸಿದ ಶಿವಶಕ್ತಿ ಶುಗರ್ಸ್ ಕಾರ್ಖಾನೆಯನ್ನು ಆರಂಭದಲ್ಲಿ 3,500 ಟಿಸಿಡಿಯಿಂದ ಆರಂಭಿಸಿ, ಇಂದು 21,000 ಟಿಸಿಡಿಗೆ ವಿಸ್ತರಿಸಿದ್ದು, 37 ಮೆ.ವ್ಯಾಟ್ ಸಹವಿದ್ಯುತ್ ಘಟಕದೊಂದಿಗೆ ನೂರಾರು ಯುವಕರಿಗೆ ಉದ್ಯೋಗ ನೀಡಿದೆ. ರೀತಿ ದೇಶದ ಮಾದರಿ ಘಟಕವಾಗಿರುವ ಹರ್ಮ್ಸ್ ಡಿಸ್ಟಿಲರಿ ಮೂಲಕ ಎಥನಾಲ್ ಉತ್ಪಾದನೆಯನ್ನು 700 ಕೆಎಲ್‌ಪಿಡಿಗೆ ಹೆಚ್ಚಿಸಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಾರೆ. ಬೆಳಗಾವಿ ಭಾಗದ ರೈತರ ಕಷ್ಟಕ್ಕೆ ಸ್ಪಂದಿಸಿ ಇನಾಮದಾರ ಶುಗರ್ಸ್ ಕಾರ್ಖಾನೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನರುಜ್ಜೀವನಗೊಳಿಸಿ ದಿನಕ್ಕೆ 4,900 ಮೆ.ಟನ್ ಗಂಧಕರಹಿತ ಸಕ್ಕರೆ ಉತ್ಪಾದನೆ ಹಾಗೂ 25 ಮೆ.ವ್ಯಾಟ್ ಸಹವಿದ್ಯುತ್ ಘಟಕ ಸ್ಥಾಪಿಸಿದ್ದಾರೆ ಎಂದರು.ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ (ಮಲ್ಟಿಸ್ಟೇಟ್) ಇಂದು ಕರ್ನಾಟಕ-ಮಹಾರಾಷ್ಟ್ರದಲ್ಲಿ 55 ಶಾಖೆಗಳೊಂದಿಗೆ ₹22,076 ಕೋಟಿಗೂ ಅಧಿಕ ವಾರ್ಷಿಕ ವ್ಯವಹಾರ ವಹಿವಾಟು ನಡೆಸುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಕೃಷಿ ಹಾಗೂ ಉದ್ಯೋಗ ಸಾಲ ನೀಡುವ ಮೂಲಕ ರೈತರು, ಬಡವರು ಮತ್ತು ಯುವಕರ ಬದುಕಿಗೆ ಆಶಾಕಿರಣವಾಗಿದೆ ಎಂದರು.ಈ ಸಂದರ್ಭದಲ್ಲಿ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಭರತೇಶ ಬನವಣೆ, ಮಹಾವೀರ ಕಾತ್ರಾಳೆ, ಅಜೀತ ದೇಸಾಯಿ, ಭೀಮಗೌಡ ಪಾಟೀಲ, ಬಿ.ಎ. ಪಾಟೀಲ, ಮಹಾಂತೇಶ ಪಾಟೀಲ, ದೇವೇಂದ್ರ ಕರೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಹಕಾರದ ಮೂಲಕ ಸಮಾಜದ ಎಲ್ಲ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ಧೀಮಂತ ನಾಯಕನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ಈ ಮೂಲಕ ಡಾ.ಪ್ರಭಾಕರ ಕೋರೆ ಅವರು ಬೆಳಗಾವಿ ಜಿಲ್ಲೆಯ ಮೊದಲ ಪದ್ಮಶ್ರೀ ಪುರಸ್ಕೃತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
-ಮಲ್ಲಿಕಾರ್ಜುನ ಕೋರೆ, ಅಧ್ಯಕ್ಷರು, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ.