ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಅ. 6ರಂದು ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಾವು ನಾಮಪತ್ರ ಸಲ್ಲಿಸುವುದಾಗಿ ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.

ರಾಣಿಬೆನ್ನೂರು: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಅಹಿಂದ ಸಂಘಟನೆಯ ಅಭ್ಯರ್ಥಿಯಾಗಿ ಅ. 6ರಂದು ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಾವು ನಾಮಪತ್ರ ಸಲ್ಲಿಸುವುದಾಗಿ ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.

ಈ ಕುರಿತು ಅವರು ಪತ್ರಿಕೆಗೆ ನೀಡಿರುವ ಹೇಳಿಕೆಯಂತೆ, 2020ರಲ್ಲಿ ಈ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಅಭ್ಯರ್ಥಿಯೂ ಇಲ್ಲದಿರುವಾಗ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಇಬ್ಬರೂ ನನಗೆ ಒತ್ತಾಯ ಮಾಡಿ ಚುನಾವಣೆಗೆ ಸ್ಪರ್ಧೆ ಮಾಡಿಸಿದ್ದರು. ಕಾಂಗ್ರೆಸ್ ಗೌರವ ಉಳಿಸಲು ಸ್ಪರ್ಧೆ ಮಾಡಿ ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದೆನು. ಆಗ ನಮ್ಮ ಪಕ್ಷದಲ್ಲಿ ಕೇವಲ ಐದಾರು ಶಾಸಕರು ಮಾತ್ರ ಇದ್ದು ನಮಗೆ ಹಿನ್ನಡೆಯಾಗಿತ್ತು. ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ ಹಾಗೂ ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಶಾಸಕರಿದ್ದಾರೆ. ನಾನು ಕಳೆದ 2 ವರ್ಷದಿಂದ ಎಲ್ಲಾ ತಯಾರಿ ಮಾಡಿಕೊಂಡು ಇಡೀ ಕ್ಷೇತ್ರ ತಿರುಗಾಡಿ ನಾಲ್ಕೂ ಜಿಲ್ಲೆಗಳಲ್ಲಿ ಅರ್ಜಿಗಳನ್ನು ಹಂಚಿ ಮತದಾರರ ನೊಂದಣಿ ಮಾಡಿಸಿರುವೆ. ನನ್ನ ಯಾವ ತ್ಯಾಗವನ್ನೂ ಪರಿಗಣಿಸದೇ ಇತ್ತೀಚೆಗೆ ಬಿಜೆಪಿಯಿಂದ ಬಂದವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದನ್ನು ಪ್ರತಿಭಟಿಸಿ ಹಿಂದುಳಿದ ಸಮಾಜದ ಒಬ್ಬರಿಗೂ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕಾಗಿ ನಾನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವೆ. ಹಾವೇರಿ ಜಿಲ್ಲೆಯ ಆಗಿನ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶಿವಾನಂದ ಪಾಟೀಲ, ಈಗಿನ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಧ್ಯಕ್ಷ ಸಂಜೀವ ನೀರಲಗಿ, ಸಂಸತ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಮುಂತಾದವರು ನನ್ನ ಮನೆಗೆ ಬಂದು ಶೀಘ್ರದಲ್ಲೇ ಸರ್ಕಾರದಲ್ಲಿ ಒಂದು ಹುದ್ದೆ ಕೊಡುವುದಾಗಿ ವಚನ ಕೊಟ್ಟ ಕಾರಣ ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯಲು ತೀರ್ಮಾನಿಸಿದ್ದೆನು.

ಆದರೆ ವಚನ ಕೊಟ್ಟು ಆರು ತಿಂಗಳು ಕಳೆದರೂ ಸಹ ನನಗೆ ಯಾವುದೇ ಹುದ್ದೆ ನೀಡಲಿಲ್ಲ. ಸುಮಾರು ಐದು ವರ್ಷಗಳ ಕಾಲ ಶಿಕ್ಷಕರು ಮತ್ತು ಪದವೀಧರ ಘಟಕದ ರಾಜ್ಯಾಧ್ಯಕ್ಷನಾಗಿ ರಾಜ್ಯದ ತುಂಬೆಲ್ಲಾ ಸುತ್ತಾಡಿ ಪಕ್ಷ ಕಟ್ಟಿದ್ದೇನೆ. ಪಕ್ಷ ಅಧಿಕಾರದಲ್ಲಿ ಇಲ್ಲದಿರುವಾಗ ಯಾರೂ ಅಭ್ಯರ್ಥಿ ಇಲ್ಲದಾಗ ಪಕ್ಷದ ಗೌರವಕ್ಕಾಗಿ 2020ರಲ್ಲಿ ಪದವೀಧರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷದ ಗೌರವ ಉಳಿಸಿದ್ದೇನೆ. ಇದ್ಯಾವುದನ್ನೂ ಕಾಂಗ್ರೆಸ್ ಹಿರಿಯರು ಗೌರವಿಸುತ್ತಿಲ್ಲ. ಇದರಿಂದಾಗಿರುವ ನೋವು ಹಾಗೂ ಬೇಸರದಿಂದ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ನಾನು ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲದಿಂದ ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕ್ಷೇತ್ರದ ತುಂಬೆಲ್ಲಾ ನಾನೇ ಮತದಾರರ ನೋಂದಣಿ ಮಾಡಿಸಿದ್ದೇನೆ. ನನಗೆ ನನ್ನದೇ ಆಗಿರುವಂತಹ ಬೆಂಬಲಿಗರಿದ್ದಾರೆ. ಅವರ ಶ್ರೀರಕ್ಷೆ ನನಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ ಎಂದು ತಿಳಿಸಿದ್ದಾರೆ.